ವಾರದ ಏಳೂ ದಿನ ಕಡ್ಡಾಯವಾಗಿ ಕಾರ್ಯನಿರ್ವಹಿಸಲಿವೆ ಸಾರ್ವಜನಿಕ ಗ್ರಂಥಾಲಯಗಳು

ಈ ಸುದ್ದಿಯನ್ನು ಶೇರ್ ಮಾಡಿ

Mahesh--01

ಬೆಂಗಳೂರು, ಆ. 13- ಇನ್ನು ಮುಂದೆ ವಾರದ ಏಳು ದಿನಗಳು ಸಾರ್ವಜನಿಕ ಗ್ರಂಥಾಲಯಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ಹಂಪಿನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೆ ಭಾನುವಾರದಂದು ಗ್ರಂಥಾಲಯಗಳಿಗೆ ರಜೆ ಇರುತ್ತಿತ್ತು. ಆದರೆ ಇನ್ನು ಮುಂದೆ ಎಲ್ಲ ದಿನಗಳು ತೆರೆದು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಗ್ರಂಥಾಲಯಗಳೇ ವಿಶ್ವವಿದ್ಯಾಲಯ ಇದ್ದಂತೆ ಎಂದು ಹೇಳಿದರು.
ನಾನು ಎಂಎ ಮಾಡುವಾಗ ಗ್ರಂಥಾಲಯದ ಅವಶ್ಯಕತೆ ಎಷ್ಟೆಂಬುದು ಅರಿವಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ಗ್ರಂಥಾಲಯ ನೆರವಾಯಿತು ಎಂದರು.  ಗ್ರಂಥಾಲಯಗಳಿಂದ ಬಿಬಿಎಂಪಿಗೆ 350 ಕೋಟಿ ಬರುತ್ತಿದೆ. ಕರ್ನಾಟಕದಿಂದ ಪ್ರತಿ ವರ್ಷ 429.96 ಕೋಟಿ ಸಂಗ್ರಹವಾಗುತ್ತದೆ. ಬೆಂಗಳೂರಿನಲ್ಲಿ ಗ್ರಂಥಾಲಯದ ಹಣವನ್ನು ರಸ್ತೆ, ಚರಂಡಿಗಾಗಿ ಅಭಿವೃದ್ದಿ ಬಳಸಲಾಗುತ್ತಿದೆ. ಇನ್ನು ಮುಂದೆ ಈ ಹಣವನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸಬೇಕು. ನಾಳೆಯಿಂದಲೇ ಈ ಬಗ್ಗೆ ನಾನು ಕಾರ್ಯೋನ್ಮುಖನಾಗುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ 6798 ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಆಯಾ ಭಾಗದ ಜನಪ್ರತಿನಿಧಿಗಳು ಅವುಗಳ ಅಭಿವೃದ್ದಿಗೆ ಶ್ರಮಿಸಬೇಕು. ಈ ಬಾರಿಯ ಬಜೆಟ್‍ನಲ್ಲಿ 112 ಕೋಟಿ ಗ್ರಂಥಾಲಯ ಇಲಾಖೆಗೆ ಮೀಸಲಿಟ್ಟಿದೆ. ಇದರಲ್ಲಿ ಶೇ.80ರಷ್ಟು ಸಿಬ್ಬಂದಿಗಳ ವೇತನಕ್ಕೆ ಹೋಗುತ್ತದೆ. ಶೇ.20ರಷ್ಟು ಹಣ ಪುಸ್ತಕಗಳಿಗೆ ಹೋಗುತ್ತದೆ. ಹಾಗಾಗಿ ಮುಂದಿನ ಬಜೆಟ್‍ನಲ್ಲಿ ಇನ್ನು ಹೆಚ್ಚಿನ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಹಂಪಿನಗರದಲ್ಲಿರುವ ಈ ಲೈಬ್ರರಿ ಅತ್ಯಂತ ವಿಶಿಷ್ಟವಾಗಿದೆ. ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದು ಎನ್.ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ 9 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಪಿ.ಡಿ.ಕೊಣ್ಣೂರ್, ಶೂದ್ರ ಶ್ರೀನಿವಾಸ್, ಗ್ರಂಥಾಲಯ ನಿರ್ದೇಶಕ ಡಾ.ಸತೀಶ್‍ಕುಮಾರ್ ಎಸ್.ಹೊಸಮನಿ , ದಾಸನೂರು ಕೂಸಣ್ಣ, ರತ್ನ ಕಾಳೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಶೈಕ್ಷಣಿಕ ಗ್ರಂಥಾಲಯ ವಿಭಾಗದಲ್ಲಿ ಡಾ.ಎಂ.ವಸಂತಕುಮಾರ್, ಡಾ.ರಮೇಶ್, ಮಲ್ಲಿಕಾರ್ಜುನ ವಡ್ಡೇನ ಕೇರಿ, ವಿಶಿಷ್ಟ ಗ್ರಂಥಾಲಯ ವಿಭಾಗದಲ್ಲಿ ಶೇಷಗಿರಿ ಕುಲಕರ್ಣಿ, ಶಿವರಾಮ್.ಬಿ.ಎಸ್, ಸಾರ್ವಜನಿಕ ಗ್ರಂಥಾಲಯ ವಿಭಾಗದಲ್ಲಿ ಪೂರ್ಣಿಮಾ, ವೆಂಕಟೇಶಮೂರ್ತಿ, ಸಿ.ಮಂಜುಳಾ, ಮೃತ್ಯುಂಜಯ ಸ್ವಾಮಿ ಬಿ.ರಾಜಗುರು ಅವರು ಪ್ರಶಸ್ತಿ ಸ್ವೀಕರಿಸಿದರು.

Facebook Comments

Sri Raghav

Admin