ಹಣಕಾಸು ವಿಚಾರಕ್ಕಾಗಿ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Sex--Murder--01
ಬೆಂಗಳೂರು, ಆ.13-ಹಣಕಾಸು ಹಾಗೂ ಕ್ಷುಲ್ಲಕ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೀಣ್ಯ 2ನೇ ಹಂತದ ಇಂದಿರಾನಗರ ನಿವಾಸಿ ಅವಿನಾಶ್ (21) ಕೊಲೆಯಾದ ದುರ್ದೈವಿಯಾಗಿದ್ದು, ಘಟನೆಯಲ್ಲಿ ಸತೀಶ್(28) ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಜೇಶ್ ಎಂಬುವರು ಜ್ಯೂಸ್ ಸೆಂಟರ್ ನಡೆಸುತ್ತಿದ್ದು, ಇಲ್ಲಿ ಕೆಲಸ ಮಾಡುವ ಅವಿನಾಶ್, ಸತೀಶ್ ಮತ್ತಿತರರಿಗೆ ಉಳಿದುಕೊಳ್ಳಲು ಸುಂಕದಕಟ್ಟೆ ಬಳಿಯ ಶ್ರೀನಿವಾಸನಗರ ಪೈಪ್‍ಲೈನ್‍ನಲ್ಲಿ ಮನೆ ಮಾಡಿಕೊಟ್ಟಿದ್ದಾರೆ.  ಜ್ಯೂಸ್ ಅಂಗಡಿಯಲ್ಲಿ ಹಾಗೂ ಇನ್ನಿತರೆ ಕೆಲಸ ಮಾಡಿಕೊಂಡಿದ್ದ ಅವಿನಾಶ್ ರಾತ್ರಿ ಸತೀಶ್‍ನ ಜೊತೆ ಹೊರಗೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದಾಗ ಶ್ರೀನಿವಾಸ ನಗರ ಸರ್ಕಲ್ ಬಳಿ ಸ್ನೇಹಿತರಾದ ರಾಜೇಶ್, ಅಭಿ, ಪುನೀತ್ ಇತರರೊಡನೆ ಹಣಕಾಸು ಹಾಗೂ ಇನ್ನಿತರ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ಅವಿನಾಶ್‍ನ ಎದೆ, ಹೊಟ್ಟೆ ಇನ್ನಿತರೆಡೆ ಬರ್ಬರವಾಗಿ ಇರಿದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸತೀಶ್‍ನಿಗೂ ಹಲ್ಲೆ ಮಾಡಿ ಸ್ನೇಹಿತರ ಗುಂಪು ಪರಾರಿಯಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಅವಿನಾಶ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಸತೀಶ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments