ಚಿಕ್ಕಮಗಳೂರಿನಲ್ಲಿ ಭಾರೀ ಮಳೆ : ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳಕೊಳ್ಳಗಳು

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru-heavy-Rain
ಚಿಕ್ಕಮಗಳೂರು, ಆ.13-ಕಾಫಿ ನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಲೆನಾಡು ಭಾಗವಾದ ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಕಳೆದ ಒಂದು ವಾರದಿಂದಲೂ ಚಿಕ್ಕಮಗಳೂರು ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಇಂದೂ ಕೂಡ ಎಡಬಿಡದೆ ಮಳೆ ಬೀಳುತ್ತಿದೆ. ಶೃಂಗೇರಿ ತಾಲೂಕಿನ ಶಾರದಾ ಮಠದ ಕಪ್ಪೆ ಶಂಕರ ದೇವಾಲಯ ಜಲಾವೃತಗೊಂಡಿದ್ದು, ತಾಲೂಕಿನ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಕೆರೆಮನೆ ಚಿಕ್ರೆ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿವೆ. ಭಾರೀ ಮಳೆಯಿಂದಾಗಿ ಬಾಳೆಹೊನ್ನೂರಿನ ಬಳಿ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಸಣ್ಣಪುಟ್ಟ ಹಳ್ಳಕೊಳ್ಳಗಳು ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಾಳೆಹೊನ್ನೂರಿನಿಂದ ಬಸರಿಕಟ್ಟೆಗೆ ಹೋಗುವ ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜಯಪುರ ಸಮೀಪದ ಮಡುವಿನ ಕೆರೆಯ ನಿವಾಸಿ ರತ್ನಮ್ಮ ಎಂಬುವರ ಮನೆಯ ಗೋಡೆ ಕುಸಿದಿದೆ. ಮಳೆಯಿಂದಾಗಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ಕಳಸಾ, ಹೊರನಾಡು ಸುತ್ತಮುತ್ತಲ ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕಡಿತಗೊಂಡಿವೆ.

ಚಾರ್ಮುಡಿ ಘಾಟ್‍ನ 8ನೇ ತಿರುವಿನ ಬಳಿ ಸಣ್ಣ ಭೂಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಯಿತು. ಅಲ್ಲದೆ, ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಪದೇ ಪದೇ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು,ಮೂಡಿಗೆರೆ ಬಳಿಯ ಹಾಂದಿ ಬಳಿ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರ ಉರುಳಿಬಿದ್ದಿರುವುದರಿಂದ ಚಿಕ್ಕಮಗಳೂರಿಗೆ ಬರುವ ವಾಹನಗಳ ಮಾರ್ಗ ಬದಲಿಸಿ ಬರುವಂತಾಯಿತು.

Facebook Comments