ದೇವರ ನಾಡು ಕೇರಳದಲ್ಲಿ ಜಲಪ್ರಳಯದಿಂದ 8,136 ಕೋಟಿ ರೂ. ನಷ್ಟ…!

ಈ ಸುದ್ದಿಯನ್ನು ಶೇರ್ ಮಾಡಿ

Kerala--01

ತಿರುವನಂತಪುರಂ (ಪಿಟಿಐ),, ಆ.13-ದೇವರ ನಾಡು ಕೇರಳದಲ್ಲಿ ಕಳೆದ ಐದು ದಶಕಗಳಲ್ಲೇ ಕಂಡು ಕೇಳರಿಯದ ಭಾರೀ ಮಳೆ, ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸತ್ತವರ ಸಂಖ್ಯೆ 39ಕ್ಕೇರಿದೆ. ಜಲಪ್ರಳಯದಿಂದ 8,136 ಕೋಟಿ ರೂ.ಗಳ ಅಪಾರ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಆದರೆ ನಷ್ಟ ಮತ್ತು ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕೇರಳದಲ್ಲಿ ನೆರೆ ಹಾವಳಿಯಿಂದ 8,136 ಕೋಟಿ ರೂ.ಗಳ ನಷ್ಟ ಸಂಭವಿಸಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‍ಡಿಆರ್‍ಎಫ್)ನಿಂದ ತುರ್ತಾಗಿ 1,220 ಕೋಟಿ ರೂ.ಗಳೊಂದಿಗೆ 400 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

Kerala--03

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ, ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರಕ್ಕೆ ನಿನ್ನೆ ಮನವಿ ಸಲ್ಲಿಸಿದರು.  ಭಾರೀ ಮಳೆ ಮತ್ತು ಪ್ರವಾಹದಿಂದ 20,000ಕ್ಕೂ ಹೆಚ್ಚು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಸಹಸ್ರಾರು ಮನೆಗಳು ಭಾಗಶಃ ಜಖಂಗೊಂಡಿವೆ. ರಾಜ್ಯದ 10,000 ಕಿ.ಮೀ. ರಾಜ್ಯ ಹೆದ್ದಾರಿಗಳಿಗೆ ಹಾನಿಯಾಗಿದೆ ಎಂದು ವಿಜಯನ್ ಮನವಿಯಲ್ಲಿ ತಿಳಿಸಿದ್ದಾರೆ.

Kerala--02

ರಾಜ್ಯದಲ್ಲಿ ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು 820 ಕೋಟಿ ರೂ.ಗಳ ಮೊತ್ತಕ್ಕಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಎನ್‍ಡಿಆರ್‍ಎಫ್‍ನಿಂದ 1,220 ಕೋಟಿ ರೂ.ಗಳ ಪರಿಹಾರ ಕೋರಲಾಗಿದೆ. ಇದರೊಂದಿಗೆ 400 ಕೋಟಿ ರೂ.ಗಳ ಹೆಚ್ಚುವರಿ ಮೊತ್ತಕ್ಕಾಗಿಯೂ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin