ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Somanath-Chatarjee
ಕೋಲ್ಕತ್ತಾ,ಆ.13- ದೇಶ ಕಂಡ ಅಪರೂಪದ ಸರಳ ಸಜ್ಜನಿಕೆಯ ರಾಜಕಾರಣಿ ಹಿರಿಯ ಕಮ್ಯೂನಿಸ್ಟ್ ನಾಯಕ, ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ(89) ದೀರ್ಘ ಕಾಲದ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹತ್ತು ಬಾರಿ ಸಂಸದರಾಗಿ ರಾಜಕೀಯ ವಲಯದಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದ ಸೋಮನಾಥ್ ಚಟರ್ಜಿ ನಿಧನಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಪಿಐ(ಎಂ) ಮುಖಂಡರಾದ ಸೀತಾರಾಮ್ ಮೆಚ್ಯೂರಿ, ಪ್ರಕಾಶ್ ಕಾರಟ್, ಎ.ರಾಜ, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಕಂಪನಿ ಮಿಡಿದಿದ್ದಾರೆ.

ವಯೋ ಸಹಜ ಅನಾರೋಗ್ಯ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸೋಮನಾಥ್ ಚಟರ್ಜಿ ಅವರಿಗೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಲಘು ಹೃದಯಾಘಾತವಾಯಿತು. ಅವರನ್ನು ಉಳಿಸಿಕೊಳ್ಳಲು ನುರಿತ ತಜ್ಞ ವೈದ್ಯರ ತಂಡ ಎಷ್ಟೇ ಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಇಂದು ಬೆಳಗ್ಗೆ 8.15ಕ್ಕೆ ಕೊನೆಯುಸಿರೆಳೆದರು ಎಂದು ಕೋಲ್ಕತ್ತಾದ ಬೆಲ್ಲಿ ವೇವ್ ಕ್ಲಿನಿಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎಂದಿನಂತೆ ಬೆಳಗ್ಗೆ ಅವರನ್ನು ಡಯಾಲಿಸಿಸ್‍ಗೆ ಕರೆದೊಯ್ಯಲಾಯಿತು. ಈ ವೇಳೆ ಇದ್ದಕ್ಕಿದ್ದಂತೆ ಲಘು ಹೃದಯಾಘಾತವಾಗಿದ್ದರಿಂದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರೆಂದು ವೈದ್ಯರು ಖಚಿತಪಡಿಸಿದರು.  ಸೋಮನಾಥ್ ಚಟರ್ಜಿ ಅವರ ನಿಧನಕ್ಕೆ ಕಾಂಗ್ರೆಸ್, ಬಿಜೆಪಿ, ಸಿಪಿಐ(ಎಂ) ಸೇರಿದಂತೆ ಅನೇಕ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಟರ್ಜಿ ಅವರ ನಿಧನ ನಮ್ಮ ಪಕ್ಷಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟ ಎಂದು ಸಿಪಿಐ(ಎಂ) ಮುಖಂಡ ಸುಜನ್ ಚಕ್ರಬೋರ್ತಿ ಹೇಳಿದ್ದಾರೆ.

# ರಾಜಕೀಯ ಹಿನ್ನೆಲೆ:
1968ರಲ್ಲಿ ಸಿಪಿಐ(ಎಂ) ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸೋಮನಾಥ್ ಚಟರ್ಜಿ ದೇಶ ಕಂಡ ಅಗ್ರಮಾನ್ಯ ರಾಜಕಾರಣಿ ಎಂದೇ ಗುರುತಿಸಿಕೊಂಡವರು. ಸತತ ಹತ್ತು ಬಾರಿ ಲೋಕಸಭೆ ಸದಸ್ಯರಾಗಿ, ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿ ದಾಖಲೆಯನ್ನೇ ಬರೆದಿದ್ದಾರೆ. ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಅವರು ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್,ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್, ವಿ.ಪಿ.ಸಿಂಗ್, ಚಂದ್ರಶೇಖರ್ ಸೇರಿದಂತೆ ಅನೇಕ ಘಟಾನುಘಟಿ ರಾಜಕೀಯ ನಾಯಕರ ಸಮಕಾಲೀನರು.

ಸಿಪಿಐ(ಎಂ)ನಲ್ಲಿ ನೀತಿ ನಿರೂಪಣೆಗಳನ್ನು ತೀರ್ಮಾನಿಸುವ ಕೇಂದ್ರ ಸಮಿತಿಯ ನಾಯಕರಾಗಿದ್ದ ಚಟರ್ಜಿ ಅವರು 2004ರಿಂದ 2009ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದರು. ಅಂದು ಸ್ಪೀಕರ್ ಆಗಿ ಅವರು ಸದನವನ್ನು ನಿರ್ವಹಿಸಿದ ರೀತಿ ದೇಶದೆಲ್ಲೆಡೆ ಮನೆ ಮಾತಾಗಿತ್ತು. ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಮೆರಿಕ ಜೊತೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡಿದ್ದರಿಂದ ಸಿಪಿಐ(ಎಂ) ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು.

ಸಿಪಿಐ(ಎಂ)ಯುಪಿಎ ಸರ್ಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೋಮನಾಥ್ ಚಟರ್ಜಿಗೆ ಒತ್ತಡ ಹಾಕಿತ್ತು. ಆದರೆ ಪಕ್ಷದ ನಿಲುವನ್ನು ಒಪ್ಪದ ಚಟರ್ಜಿ ಅವರು ರಾಜೀನಾಮೆ ನೀಡಲು ಒಪ್ಪಲಿಲ್ಲ. ಇದರಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಕೇಂದ್ರದಲ್ಲಿ ಯುಪಿಎ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು, 2014ರಲ್ಲಿ ಎನ್‍ಡಿಎ ಸರ್ಕಾರ ಬಂದು ನರೇಂದ್ರ ಮೋದಿ ಪ್ರಧಾನಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ)ಪ್ರಾಬಲ್ಯ ಕುಸಿದು ಟಿಎಂಸಿ ಅಧಿಕಾರಕ್ಕೆ ಬಂದ ನಂತರ ಸೋಮನಾಥ ಚಟರ್ಜಿ ತೆರೆಮರೆಗೆ ಸರಿದಿದ್ದರು.

Facebook Comments

Sri Raghav

Admin