ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವನ್ನುಟುಮಾಡಿದ ಸಂಸದರಿಗೆ ಟಿಕೆಟ್ ಇಲ್ಲ : ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amit-shah--01
ನವದೆಹಲಿ,ಆ.13-ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ನೀಡುತ್ತಿರುವವರು ಹಾಗೂ ಕ್ಷೇತ್ರವನ್ನು ಕಡೆಗಣಿಸಿರುವ ಸಂಸದರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಚ್ಚರಿಸಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಪಕ್ಷದ ಮುಖಂಡರು ಹಾಗೂ ಕೆಲ ಸಚಿವರೊಂದಿಗೆ ಗೌಪ್ಯವಾಗಿ ಸಭೆ ನಡೆಸಿರುವ ಅಮಿತ್ ಷಾ, 2019ರ ಚುನಾವಣೆಯಲ್ಲಿ ನಾವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಕೆಲ ಸಚಿವರು ಮತ್ತು ಸಂಸದರ ತಲೆದಂಡವಾಗುವುದು ಅನಿವಾರ್ಯ ಎಂಬ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.

ವಿಶೇಷವಾಗಿ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಸಂಗೀತ್ ಸೋಮ್, ಸುರೇಶ್ ರಾಣ, ಸಂಜೀವ್ ಬಲ್ಯಾನ್, ರಾಜೇಂದ್ರ ಅಗರ್‍ವಾಲ್, ಕರ್ನಾಟಕದ ಉತ್ತರ ಕನ್ನಡ ಸಂಸದ ಹಾಗೂ ಸಚಿವ ಅನಂತಕುಮಾರ್ ಹೆಗಡೆ, ಕ್ಷೇತ್ರವನ್ನು ಕಡೆಗಣಿಸಿರುವ ಆರೋಪಕ್ಕೆ ಗುರಿಯಾಗಿರುವ ಸಂಸದೆ ಹೇಮಾಮಾಲಿನಿಗೂ ಅಮಿತ್ ಷಾ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೆಲವು ಸಂಸದರು ಮತ್ತು ಸಚಿವರು ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನೀಡಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸರ್ಕಾರದ ಸಾಧನೆಗಳಿಂತ ನಿಮ್ಮ ವಿವಾದಾತ್ಮಕ ಹೇಳಿಕೆಗಳೇ ಹೆಚ್ಚು ಸುದ್ದಿಯಾಗುತ್ತಿದೆ. ಇದರಿಂದ ನಾವು ಅಧಿಕಾರಕ್ಕೆ ಬರುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಪಕ್ಷದ ಆದೇಶ ಹಾಗೂ ಶಿಸ್ತು ಉಲ್ಲಂಘಿಸಿ ಯಾರೊಬ್ಬರು ನಡೆದುಕೊಳ್ಳಬಾರದೆಂದು ಪದೇ ಪದೇ ಹೇಳುತ್ತಾ ಬಂದಿದ್ದೇವೆ. ಆದರೂ ಕೆಲವರು ಉದ್ದೇಶಪೂರ್ವಕವಾಗಿಯೇ ಇಂತಹ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಅಂಥವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಚುನಾವಣೆಗೂ ಮುನ್ನ ನಾವು ಪ್ರಣಾಳಿಕೆಯಲ್ಲಿ ದೇಶದ ಜನತೆಗೆ ನೀಡುವ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಈಗಲೂ ದೇಶದ ಜನತೆ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ 2014ರ ಲೋಕಸಭೆ ಚುನಾವಣೆ ನಂತರ ವಿವಿಧ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಅಧಿಕಾರ ಹಿಡಿದಿದ್ದೇವೆ. ಯಾರೂ ಏನೇ ಹೇಳಿದರೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದರೆ ವಿವಾದಾತ್ಮಕ ಹೇಳಿಕೆ ನೀಡುವುದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಸೃಷ್ಟಿಸುತ್ತವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

# ಕಡೆಗಣಿಸಿದವರಿಗೆ ಟಿಕೆಟ್ ಇಲ್ಲ:
ಇನ್ನು ಕ್ಷೇತ್ರವನ್ನು ಕಡೆಗಣಿಸಿ ಮತದಾರರ ಕೋಪಕ್ಕೆ ಕಾರಣವಾಗಿರುವ ಹಾಲಿ ಕೆಲ ಸಂಸದರಿಗೂ ಟಿಕೆಟ್ ನೀಡುವುದಿಲ್ಲ ಎಂದು ಅಮಿತ್ ಷಾ ಸ್ಪಷ್ಟವಾಗಿಯೇ ಸಭೆಯಲ್ಲಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.  ಕೆಲ ಸಂಸದರು ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅತಿಥಿಗಳಂತೆ ಭೇಟಿ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತದಾರರನ್ನು ಕಡೆಗಣಿಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ನಿಮಗೂ ಗೊತ್ತು. ಇಂಥವರಿಗೆ ಟಿಕೆಟ್ ನೀಡದಿರುವುದೇ ಒಳಿತು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಗೆದ್ದಿರುವ ಚಿತ್ರನಟಿ ಹೇಮಾಮಾಲಿನಿ ಸೇರಿದಂತೆ ಅನೇಕರು ಕ್ಷೇತ್ರಗಳಿಗೆ ಹೋಗುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಅನೇಕ ಸಂಸದರ ಪಟ್ಟಿ ನನ್ನ ಬಳಿ ಇದೆ. ಮುಂಬರುವ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin