ಲಕ್ನೋಗೆ ಏರ್ ಶೋ ಸ್ಥಳಾಂತರ ಕುರಿತು ಯಡಿಯೂರಪ್ಪ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

yadiyurappa-Air-Show

ಗದಗ,ಆ.13-ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ವೈಮಾನಿಕ ಪ್ರದರ್ಶನ(ಏರ್ ಶೋ) ಸ್ಥಳಾಂತರವಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನವನ್ನು ಉಳಿಸಿಕೊಳ್ಳಲು ಬಿಜೆಪಿ ಸಂಸದರು ಹಾಗೂ ಸಚಿವರು ಸೇರಿದಂತೆ ಪಕ್ಷದ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಲಿದ್ದೇವೆ ಎಂದು ಸ್ಪಷ್ಟಪಡಿಸಿದರು.  ಬೆಂಗಳೂರಿನಲ್ಲೇ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಲಭ್ಯವಿರುವ ಕಾರಣ ಸ್ಥಳಾಂತರ ಮಾಡುವ ಅಗತ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ತನ್ನದೇ ಆದ ಸ್ಥಾನವಿದೆ. ಇದು ಪ್ರತಿಷ್ಠೆಯ ವಿಷಯವೂ ಹೌದು. ಮುಂದಿನ ವರ್ಷ ನಡೆಯಲಿರುವ ವೈಮಾನಿಕ ಪ್ರದರ್ಶನ ಇಲ್ಲಿಯೇ ನಡೆಸಲು ಸರ್ವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಈಗಾಗಲೇ ಸಂಸದರು ಮತ್ತು ಸಚಿವರು ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಬೆಂಗಳೂರಿನಿಂದ ಲಖ್ನೋಗೆ ಸ್ಥಳಾಂತರ ಮಾಡದಂತೆ ಒತ್ತಡ ಹಾಕಿದ್ದಾರೆ. ಶೀಘ್ರದಲ್ಲೇ ಪಕ್ಷದ ವತಿಯಿಂದ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿದೆ ಎಂದರು.  ಇತ್ತೀಚೆಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡುವುದರ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಜನರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಪಕ್ಷದವರಾದ ನಾವು ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದೇವೆ. ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ನೀವೇನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಪ್ರತಿ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನಲ್ಲಿ ಕಳೆದ 11 ವರ್ಷಗಳಿಂದ ವೈಮಾನಿಕ ಪ್ರದರ್ಶನ ನಗರದ ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಉತ್ತರ ಪ್ರದೇಶದ ರಾಜಧಾನಿ ಲಖ್ನೋದ ಭಕ್ಷಿ ತಲಾಬ್ ವಾಯು ನೆಲೆಯಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ.

ರಾಜಕೀಯ ದೊಂಬರಾಟ ಬೇಡ:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ದೊಂಬರಾಟ ಬಿಟ್ಟು ರೈತರ ಜ್ವಲಂತ ಸಮಸ್ಯೆಗಳನ್ನು ಆಲಿಸಲು ಮುಂದಾಗಬೇಕು. ಗದ್ದೆಯಲ್ಲಿ ನಾಟಿ ಮಾಡಿದ ತಕ್ಷಣ ಅನ್ನದಾತನ ಸಮಸ್ಯೆಗಳು ಪರಿಹಾರವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಈವರೆಗೂ ನಿಗದಿತ ಪ್ರಮಾಣದಲ್ಲಿ ಮಳೆಯಾಗದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅನೇಕ ಕಡೆ ಮಳೆಯಾಗದೆ ಬೆಳೆ ಒಣಗಿ ಹೋಗುತ್ತಿದೆ. ರೈತರು ಹತಾಶರಾಗಿ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆಗಳನ್ನು ಆಲಿಸಬೇಕಾದ ಮುಖ್ಯಮಂತ್ರಿ ಗದ್ದೆಯಲ್ಲಿ ನಾಟಿ ಮಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣವೇ ಮುಖ್ಯಮಂತ್ರಿ ಸೇರಿದಂತೆ ಕೃಷಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಶಾಸಕರು ಕ್ಷೇತ್ರದಲ್ಲೇ ಇದ್ದು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸರ್ಕಾರ ಗೊಂದಲದಲ್ಲಿರುವ ಕಾರಣ ಎಲ್ಲ ಕಾರ್ಯಗಳು ನಿಂತುಹೋಗಿವೆ ಎಂದು ಬಿಎಸ್‍ವೈ ಕಿಡಿಕಾರಿದರು. ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಶಾಸಕರಾದ ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಮತ್ತಿತರರು ಇದ್ದರು.

Facebook Comments

Sri Raghav

Admin