ಅಲ್ಪಸಂಖ್ಯಾತರ ‘ಕಲ್ಯಾಣ’ಕ್ಕಾಗಿ ಸುಸಜ್ಜಿತ ಶಾದಿಮಹಲ್ : ಜಮೀರ್ ಅಹಮದ್

ಈ ಸುದ್ದಿಯನ್ನು ಶೇರ್ ಮಾಡಿ

Jameer-Ahamd-Khan

ಕನಕಪುರ, ಆ.13-ಬಡ,ಅಲ್ಪಸಂಖ್ಯಾತ ವರ್ಗದ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಂತಹಂತವಾಗಿ ಜಾರಿಗೆ ತರಲಿದ್ದು, ಈ ಭಾಗದ ಸಂಸದರ ಒತ್ತಾಯದ ಮೇರೆಗೆ ಅಲ್ಪಸಂಖ್ಯಾತರಿಗಾಗಿ ಸುಸಜ್ಜಿತ ಶಾದಿಮಹಲ್ ಮಂಜೂರು ಮಾಡುವುದಾಗಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.

ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಚಿವರಿಗೆ ಅಭಿನಂದನೆ ಮತ್ತು ತಾಲ್ಲೂಕು ಅಲ್ಪಸಂಖ್ಯಾತ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು ಪಡಿತರದಾರರಿಗೆ ಕೆಲವು ಕಾನೂನು ತೊಡಕುಗಳಿಂದ ಪಡಿತರ ಸಿಗುತ್ತಿಲ್ಲವೆಂಬ ದೂರು ಬಂದಿದ್ದು, ಇದನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿ ವಕ್ಫ್ ಇಲಾಖೆಯಿಂದ ತಾಲ್ಲೂಕು ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದಾಗಿ ತಿಳಿಸಿದರು.

ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕನಕಪುರ ತಾಲ್ಲೂಕಿನಲ್ಲಿ ವಸತಿ ಯೋಜನೆಯಲ್ಲಿ ಹಲವು ತಾಂತ್ರಿಕ ದೋಷದಿಂದಾಗಿ ಕೆಲವು ಸಮಸ್ಯೆಗಳಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ ಹಾಗು ಮನೆ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಆರು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ಹೇಳಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಿಗಾಗಿಯೇ ಖಾಲಿ ನಿವೇಶನದ ಹಕ್ಕು ಪತ್ರಗಳನ್ನು ನೀಡಲಾಗಿದೆ. ವಸತಿ ಇಲಾಖೆಯಿಂದ ಈ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಬೇಕು ಹಾಗು ಅಲ್ಪಸಂಖ್ಯಾತರಿಗಾಗಿ ದೊಡ್ಡ ಷಾದಿ ಮಹಲ್ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಸಚಿವರಾದ ಜಮೀರ್ ಅಹಮದ್‍ಖಾನ್ ಹಾಗು ಯು.ಟಿ.ಖಾದರ್ ಅವರನ್ನು ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ತಾಲ್ಲೂಕು ನಾಗರಿಕರ ಪರವಾಗಿ ಸನ್ಮಾನಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಶೇಖರ್, ನಗರಸಭಾಧ್ಯಕ್ಷ ಕೆ.ಎನ್.ದಿಲೀಪ್, ಜಿ.ಪಂ. ಸದಸ್ಯರಾದ ಬಸಪ್ಪ, ರಾಜೇಂದ್ರ, ಹೆಚ್.ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವ್, ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ರಾಮಚಂದ್ರು, ಅಮೀರ್‍ಖಾನ್, ಕಾಂಗ್ರೆಸ್ ಯುವ ಮುಖಂಡರಾದ ಅಸ್ಲಂ, ಕೆಂಪರಾಜು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Facebook Comments

Sri Raghav

Admin