ಮರುನಿರ್ಮಾಣ ಹೆಸರಿನಲ್ಲಿ 650 ಕೋಟಿ ಮೌಲ್ಯದ ಇಂದಿರಾನಗರ ಕಾಂಪ್ಲೆಕ್ಸ್ ಕಬಳಿಸಲು ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh
ಬೆಂಗಳೂರು, ಆ.14- ಸಚಿವ ಕೆ.ಜೆ.ಜಾರ್ಜ್ ಅವರು 650 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರಲ್ಲದೆ, 250 ಕೋಟಿ ರೂ.ನಷ್ಟು ಹಣವನ್ನು ವಂಚಿಸಿ 50 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು. ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ 180 ಪುಟಗಳ ದಾಖಲೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಗೋವಿಂದರಾಜ್, ನಿವೃತ್ತ ಐಎಎಸ್ ಅಧಿಕಾರಿ ಶಾಮ್‍ಭಟ್ ಇವರ ವಿರುದ್ಧ ಎಸಿಬಿ, ಬಿಎಂಟಿಎಫ್‍ನಲ್ಲಿ ವಂಚನೆ, ನಕಲಿ ದಾಖಲೆ ತಯಾರಿಕೆ, ಅಧಿಕಾರ ದುರುಪಯೋಗ, ಸರ್ಕಾರಿ ಆಸ್ತಿ ಕಬಳಿಕೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ದೂರು ದಾಖಲು ಮಾಡಿದ್ದಾರೆ.

ಅಕ್ರಮವಾಗಿ ಕಬಳಿಸಿರುವ ಸರ್ಕಾರಿ ಸ್ವತ್ತುಗಳನ್ನು ಸಕ್ರಮಗೊಳಿಸಿಕೊಳ್ಳಲು ಎಂಎಸ್‍ಇ ಕಂಪೆನಿಯಲ್ಲಿ 4729 ಸಹ ಸಂಸ್ಥೆಗಳು ಇರುವಿಕೆಯನ್ನು ತೋರಿಸುವ ಮೂಲಕ ಸಾವಿರಾರು ಕೋಟಿ ರೂ. ಆದಾಯ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಸಚಿವ ಜಾರ್ಜ್ ವಿರುದ್ಧ ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕರು ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಜಂಟಿ ಸಹಭಾಗಿತ್ವದಲ್ಲಿ ಮರು ನಿರ್ಮಾಣ ಎಂಬ ಹೆಸರಿನಲ್ಲಿ 650 ಕೋಟಿಗೂ ಹೆಚ್ಚು ಮೌಲ್ಯದ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಕಬಳಿಸಲು ಸಂಚು ರೂಪಿಸಲಾಗಿದೆ. ಇದಲ್ಲದೆ ಐದು ಸಾವಿರ ಕೋಟಿ ಬೆಲೆ ಬಾಳುವ ಏಳು ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಕಬಳಿಸಲು ಜಾರ್ಜ್ ಸಂಚು ರೂಪಿಸಿದ್ದಾರೆ. ಇದರಲ್ಲಿ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಸ್ವತ್ತನ್ನು ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಸಂಸ್ಥೆ ಪರೋಕ್ಷ ಮಾಲೀಕತ್ವಕ್ಕೆ ಬಿಟ್ಟುಕೊಡಲಾಗಿದೆ ಎಂದು ಆರೋಪಿಸಿದ್ದಾರೆ.

ಉಳಿದ ಆರು ಬಿಡಿಎ ಕಾಂಪ್ಲೆಕ್ಸ್‍ಗಳ ಟೆಂಡರ್ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ಅವುಗಳೆಲ್ಲವನ್ನೂ ಎಂಬೆಸ್ಸಿ ಸುಪರ್ದಿಗೆ ಕೊಡಲು ಸಂಚು ರೂಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದಿನ ಬಿಡಿಎ ಆಯುಕ್ತರಾದ ಶಾಮ್‍ಭಟ್ ಅವರ ಕಾನೂನು ಬಾಹಿರ ನಿರ್ಣಯಗಳಿಂದ ಅಮೂಲ್ಯ ಸರ್ಕಾರಿ ಸ್ವತ್ತುಗಳು ಜಾರ್ಜ್ ಪಾಲಾಗಿವೆ. ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಸ್ವತ್ತುಗಳನ್ನು ಯಾವ ರೀತಿ ಕಬಳಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

ಇಂದಿರಾನಗರ ಬಿಡಿಎ ವಾಣಿಜ್ಯ ಸಂಕೀರ್ಣ ಸುಪರ್ದಿಗೆ ತೆಗೆದುಕೊಂಡಿರುವುದರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯದ ನಿಯಮವನ್ನು (ಎನ್‍ಜಿಟಿ) ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಸಂಕೀರ್ಣದ ಎದುರು ಭಾಗದಲ್ಲೇ ಕೆರೆ ಇದ್ದು, ಸಂಕೀರ್ಣಕ್ಕೆ ಹೊಂದಿಕೊಂಡಂತೆ ರಾಜಕಾಲುವೆ ಹಾದು ಹೋಗಿದೆ. ಎನ್‍ಜಿಟಿ ಆದೇಶದಂತೆ ಕೆರೆಯ ಗಡಿ ಭಾಗ 75 ಮೀಟರ್ ಸೆಕೆಂಡರಿ ಡ್ರೈನಿಗೆ 50ಮೀಟರ್ ಭಪರ್ ಝೋನ್ ಪ್ರದೇಶವಾಗಿರುತ್ತದೆ. ಇಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ . ಈ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಹೇಗೆ ಲಭಿಸಿತು ಎಂದು ಪ್ರಶ್ನಿಸಿದರು.

ಬಿಡಿಎ ವಾಣಿಜ್ಯ ಸಂಕೀರ್ಣದ ಮರು ನಿರ್ಮಾಣದ ಹೆಸರಿನಲ್ಲಿ 171 ಬೃಹತ್ ಮರಗಳನ್ನು ಕಡಿದು ಹಾಕಲು ನಿರ್ಧರಿಸಲಾಗಿರುವುದು ಖಂಡನೀಯ. ನಗರ ಪ್ರದೇಶಗಳಲ್ಲಿ ಜಾರಿ ಇರುವ ನಿಯಮದಂತೆ ಯಾವುದೇ ಕಟ್ಟಡ ನಿರ್ಮಾಣಗಾರರು ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸುವ ವಸತಿ ಸಮುಚ್ಛಯಗಳಾಗಲಿ, ವಾಣಿಜ್ಯ ಸಂಕೀರ್ಣಗಳಾಗಲಿ ಒಪ್ಪಂದ ಮಾಡಿಕೊಂಡ ಸ್ವತ್ತಿನ ಮಾಲೀಕನಿಗೆ ಆತನ ಸ್ವತ್ತಿನ ಮಾರುಕಟ್ಟೆ ಬೆಲೆಯ ಶೇ.15ರಿಂದ 20ರಷ್ಟು ವಹಿವಾಟಿನ ವರ್ಗಾವಣೆ ಹಕ್ಕು (ಗುಡ್‍ವ್ಹಿಲ್) ರೂಪದಲ್ಲಿ ನೀಡಬೇಕಾಗುತ್ತದೆ. ಆದರೆ, ಈ ಟೆಂಡರ್ ಅನುಮೋದನೆ ಪಡೆದುಕೊಂಡಿರುವ ಎಂಬೆಸ್ಸಿ ಸಂಸ್ಥೆ ಟೆಂಡರ್ ಷರತ್ತುಗಳಲ್ಲಿ ಗುಡ್‍ವ್ಹಿಲ್ ಅಂಶವನ್ನೇ ಸೇರಿಸಿಲ್ಲ ಎಂದರು.

ಈ ಮುಖಾಂತರ ಬಿಡಿಎಗೆ ಪಾವತಿಸಬೇಕಾಗಿದ್ದ 100ಕೋಟಿ ರೂ.ಗಳಷ್ಟು ಗುಡ್‍ವ್ಹಿಲ್ ಹಣದ ಪೈಕಿ ಶೇ.50ರಷ್ಟು ಹಣವನ್ನು ತಮ್ಮದೇ ಪಾಲುದಾರಿಕೆಯ ಎಂಬೆಸ್ಸಿ ಸಂಸ್ಥೆಯಿಂದ ಸ್ವತಃ ಜಾರ್ಜ್ ಹಾಗೂ ಗೋವಿಂದರಾಜು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ವಸತಿ ವಾಣಿಜ್ಯ ಸಮುಚ್ಚಗಳ ಜಂಟಿ ಸಹಭಾಗಿತ್ವದಲ್ಲಿ ಮಾಲೀಕತ್ವದ ಪಾಲುದಾರಿಕೆ 50:50ರ ಅನುಮಾತದಲ್ಲಿರುತ್ತದೆ. ಆದರೆ, ಈ ಯೋಜನೆಯಲ್ಲಿ ಜಾರ್ಜ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಅನುಪಾತ 35:65ಕ್ಕೆ ಪರಿವರ್ತಿಸಿಕೊಂಡಿದ್ದಾರೆ. ಒಟ್ಟಾರೆ ಬೃಹತ್ ಹಗರಣ ಇದಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

Facebook Comments

Sri Raghav

Admin