ಡಿ.ಕೆ.ಶಿ ಸೇರಿ ಹಲವು ಸಚಿವರಿಗೆ ಕೆಲವು ಸೂಚನೆಗಳನ್ನು ನೀಡಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gadnhi--014
ಬೆಂಗಳೂರು, ಆ.14- ಮೈತ್ರಿ ಸರ್ಕಾರದ ಧರ್ಮವನ್ನು ಕಾಪಾಡಿಕೊಳ್ಳಿ, ಹಿಂದಿನ ಸರ್ಕಾರದ ಯೋಜನೆಗಳನ್ನೂ ಜಾರಿಯಾಗುವಂತೆ ನೋಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಪಕ್ಷದ ಸಂಘಟನೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಾಕೀತು ಮಾಡಿದ್ದಾರೆ. ನಿನ್ನೆ ಬೀದರ್‍ನಲ್ಲಿ ನಡೆದ ಜನಧ್ವನಿ ರೈತ ಯಾತ್ರೆ ನಂತರ ಕಾಂಗ್ರೆಸ್ ಮುಖಂಡರ ಜತೆ ಸಮಾಲೋಚನಾ ಸಭೆ ನಡೆಸಿರುವ ರಾಹುಲ್‍ಗಾಂಧಿ ಅವರು, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಸಚಿವರಿಗೆ ಇಂತಹ ಕೆಲವು ಸೂಚನೆಗಳನ್ನು ನೀಡಿದ್ದು, ಅಧಿಕಾರಕ್ಕಾಗಿ ಪಕ್ಷವನ್ನು ದುರ್ಬಲಗೊಳಿಸುವುದು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಮೈತ್ರಿ ಸರ್ಕಾರದ ಆಗುಹೋಗುಗಳ ಬಗ್ಗೆ ರಾಹುಲ್‍ಗಾಂಧಿ ಅವರ ಗಮನ ಸೆಳೆದಿದ್ದರು. ಹಿಂದಿನ ಸರ್ಕಾರದ ಹಲವಾರು ಯೋಜನೆಗಳನ್ನು ಮೈತ್ರಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಸಾಲ ಮನ್ನಾ ಮಾಡಿದ ನಂತರ ಹಣಕಾಸಿನ ಕೊರತೆ ಎದುರಾಗಿದ್ದು, ಹೊಸ ಕಾರ್ಯಕ್ರಮಗಳೂ ಜಾರಿಯಾಗುತ್ತಿಲ್ಲ. ಕನಿಷ್ಠ ಹಿಂದಿನ ಸರ್ಕಾರದ ಯೋಜನೆಗಳಾದರೂ ಜಾರಿಯಲ್ಲಿರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲು ಕಷ್ಟವಾಗುತ್ತದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ಸಾಲ ಮನ್ನಾದ ಕೀರ್ತಿಯನ್ನು ಜೆಡಿಎಸ್ ಹೈಜಾಕ್ ಮಾಡುತ್ತಿದೆ. ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಆಯಾ ಇಲಾಖೆ ಸಚಿವರು ಸಂಪುಟದಲ್ಲಿ ಬಾಯಿಬಿಡದೆ ಮೌನವಾಗಿರುವ ಮೂಲಕ ಆಡಳಿತ ಹಳಿತಪ್ಪಲು ಕಾರಣರಾಗುತ್ತಿದ್ದಾರೆ ಎಂದು ರಾಹುಲ್‍ಗಾಂಧಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಖಾರವಾಗಿ ಸೂಚನೆ ನೀಡಿರುವ ರಾಹುಲ್‍ಗಾಂಧಿ, ಮೈತ್ರಿ ಸರ್ಕಾರ ರಚನೆ ಮಾಡಿದ ತಕ್ಷಣ ಕಾಂಗ್ರೆಸ್ ಪಕ್ಷ ಜೆಡಿಎಸ್‍ನ ಆಜ್ಞೆಗಳನ್ನು ಪಾಲಿಸಬೇಕೆಂದೇನಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿಯೇ ಮೈತ್ರಿ ಸರ್ಕಾರ ರಚಿಸಿದ್ದು. ಕಾಂಗ್ರೆಸ್ ದುರ್ಬಲಗೊಂಡರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಜೆಡಿಎಸ್ ಬಿಜೆಪಿಗೆ ಪ್ರತಿಸ್ಪರ್ಧಿಯಲ್ಲ. ಸ್ಪರ್ಧೆ ಒಡ್ಡುವ ಸಾಮಥ್ರ್ಯವೂ ಇಲ್ಲ. ಕಾಂಗ್ರೆಸ್‍ಗೆ ಮಾತ್ರ ಬಿಜೆಪಿಯನ್ನು ಎದುರಿಸಲು ಸಾಧ್ಯ. ಹೀಗಾಗಿ ಕಾಂಗ್ರೆಸ್ ನಾಯಕರು, ಸಚಿವರು ಮೈತ್ರಿ ಸರ್ಕಾರದ ಧರ್ಮವನ್ನು ಪಾಲನೆ ಮಾಡುತ್ತಲೇ ಉತ್ತಮ ರೀತಿಯಲ್ಲಿ ಸರ್ಕಾರ ನಡೆಸಲು ಎಚ್ಚರಿಕೆ ವಹಿಸಬೇಕು.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಅಬ್ಬರ ಮತ್ತು ಸುಳ್ಳು ಪ್ರಚಾರದಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಹೊಸ ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳಿಲ್ಲ ಎಂದರೆ ಲೋಕಸಭೆ ಚುನಾವಣೆಯಲ್ಲಿ ಯಾವ ಆಧಾರದ ಮೇಲೆ ಮತ ಕೇಳಲು ಸಾಧ್ಯ? ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರ ಅನುಷ್ಠಾನಗೊಳಿಸಿದ ಜನಪರ ಯೋಜನೆಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಲು ಆಸಕ್ತಿ ವಹಿಸಿ ಎಂದಿದ್ದಾರೆ.

ಮೈತ್ರಿ ಸರ್ಕಾರ ಜತೆ ಜತೆಯಾಗಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ರೂಪಿಸಿದರೆ ಸಂತೋಷ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆ ರೀತಿಯ ಅವಕಾಶಗಳು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ.
ನಿಗಮಮಂಡಳಿ ನೇಮಕಾತಿ ವಿಷಯದಲ್ಲಿ ಮುಂಜಾಗ್ರತೆ ವಹಿಸಿ ಹೆಚ್ಚು ಜನಸಂಪರ್ಕ ಇರುವ ನಿಗಮಮಂಡಳಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ. ಪಕ್ಷ ಸಂಘಟನೆಗೆ ಅನುಕೂಲವಾಗುವ ನಿರ್ಧಾರಗಳು ಬಂದಾಗ ಎಲ್ಲರೂ ಒಟ್ಟಾಗಿ ಒಂದೇ ದನಿಯಲ್ಲಿ ಪ್ರತಿಕ್ರಿಯೆ ನೀಡಿ. ಈವರೆಗೂ ಕಾಂಗ್ರೆಸ್‍ನಲ್ಲಿ ಯಾವುದೇ ಒಡಕಿನ ದನಿಗಳಿಲ್ಲ. ಮುಂದೆಯೂ ಇದೇ ವಾತಾವರಣವನ್ನ ಕಾಯ್ದುಕೊಳ್ಳಿ ಎಂದು ರಾಹುಲ್‍ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin