ಬೀದರ್ ನಲ್ಲಿ ಸ್ಪರ್ಧಿಸಿದರೂ ರಾಹುಲ್ ಗಾಂಧಿ ಸೋಲು ಕಟ್ಟಿಟ್ಟ ಬುತ್ತಿ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಹುಬ್ಬಳ್ಳಿ, ಆ.14- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ. ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಅವರಿಗೆ ಮತ ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಲುವ ಭೀತಿಯಿಂದ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಬಹುದೆಂದು ಭಾವಿಸಿದ್ದಾರೆ. ಬೀದರ್‍ನಿಂದ ಕಣಕ್ಕಿಳಿದರೂ ಅವರ ಸೋಲನ್ನು ಯಾರೊಬ್ಬರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ಪ್ರವಾಸದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಆರೋಪಗಳ ಸುರಿಮಳೆಗೈದರು. ಕರ್ನಾಟಕದಿಂದ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಲು ಬಿಜೆಪಿ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಲೋಕಸಭಾ ಚುಣಾವಣೆಯಲ್ಲಿ ರಾಜ್ಯದ ಜನತೆ ಸಾರಾಸಗಟಾಗಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ನಂತರ ಸಾಲು ಸಾಲು ಸೋಲು ಕಂಡಿರುವ ಕಾಂಗ್ರೆಸ್‍ಗೆ ಗೆಲುವು ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಜನರ ವಿಶ್ವಾಸ ಕಳೆದುಕೊಂಡಿರುವ ಒಂದು ರಾಷ್ಟ್ರೀಯ ಪಕ್ಷ ಇಂದು ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ. ಯಾರು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಬೇರುಗಳು ಸಾಕಷ್ಟು ಭದ್ರವಾಗಿವೆ ಎಂದರು.

ಉತ್ತರ ಕರ್ನಾಟಕ ಮರೆತ ಸಿಎಂ :
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ ಮೂರು ಜಿಲ್ಲೆಗಳಿಗೆ ಸಿಎಂ ಎನ್ನುವಂತಾಗಿದೆ.ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬರಗಾಲ ತಾಂಡವವಾಡುತ್ತಿವೆ. ಕುಡಿಯುವ ನೀರು, ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ. ಜಾನುವಾರುಗಳಿಗೂ ನೀರು ಇಲ್ಲದಂತಾಗಿದೆ. ನೂತನ ತಾಲೂಕುಗಳಿಗೆ ತಹಶೀಲ್ದಾರ್ ಅವರ ನೇಮಕ ಬಿಟ್ಟು ಮತ್ಯಾವುದೇ ಕೆಲಸ ಆಗಿಲ್ಲ ಎಂದು ಅವರು ಆರೋಪಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಲಿಂಗಾಯತ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರೆ. ನೀವು, ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕ ಹಿಂದುಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರಣ. ಅತಿ ಹೆಚ್ಚು ಆಳ್ವಿಕೆ ನಡೆಸಿದ ಕಾಂಗ್ರೆಸ್ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲಿರುವ ಕೆ.ಶಿಪ್ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.ಇದು ಏನನ್ನು ಸೂಚಿಸುತ್ತದೆ ಎಂದು ಅವರು ಪ್ರಶ್ನಿಸಿದರು. ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧವಿಮಾನ ಒಪ್ಪಂದದ ಬಗ್ಗೆ ಆಧಾರರಹಿತವಾಗಿ ಆರೋಪ ಮಾಡುತ್ತಿದ್ದಾರೆ. ಫ್ರಾನ್ಸ್ ಅಧ್ಯಕ್ಷರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅವಿಶ್ವಾಸ ನಿರ್ಣಯದ ಹುಚ್ಚಾಟದ ನಂತರವೂ ಅವರು ಎಚ್ಚೆತ್ತುಕೊಳ್ಳಬೇಕಿತ್ತು. ಈಗಲೂ ಅವರು ಅತ್ಯಂತ ಬಾಲಿಷತನದ ಹಾಗೂ ಬೇಜವಾಬ್ದಾರಿತನದ ಹೇಳಿಕೆ ನಿಲ್ಲಿಸಬೇಕು. ನಿಮ್ಮ ಸುಳ್ಳು ಹೇಳಿಕೆಗಳನ್ನು ಜನರು ನಂಬುವಷ್ಟು ಮೂರ್ಖರಲ್ಲ ಎಂದು ಜೋಷಿ ತಿರುಗೇಟು ನೀಡಿದರು.

Facebook Comments

Sri Raghav

Admin