ಬಹುಭಾಷೆ-ಧರ್ಮ-ಸಂಸ್ಕೃತಿಗಳ ದೇಶ ನಮ್ಮದು : ಜಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

KJ-Gorge-Indi

ಚಿಕ್ಕಮಗಳೂರು, ಆ.15- ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು.

ನಗರದ ನೇತಾಜಿ ಸುಭಾಷ್‍ಚಂದ್ರಬೋಸ್ ಕ್ರೀಡಾಂಗಣದಲ್ಲಿ 72ನೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, 1927 ಆಗಸ್ಟ್ 18ರಂದು ಚಿಕ್ಕಮಗಳೂರಿಗೆ ಮಹಾತ್ಮಗಾಂಧಿ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಪಡೆಯುವ ಬಗ್ಗೆ ಯುವಕರಿಗೆ ಸಂದೇಶ ನೀಡಿದ್ದನ್ನು ಸ್ಮರಿಸಿದರು. ಬಹುಭಾಷೆ, ಬಹುಧರ್ಮ ಹಾಗೂ ಬಹು ಸಂಸ್ಕೃತಿಗಳ ದೇಶ ನಮ್ಮದು. ಈ ಏಕತೆಯನ್ನು ಸಂವಿಧಾನದ ರೀತಿ ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅಧಿಕಾರ, ಅವಕಾಶ ಮತ್ತು ಸಂಪತ್ತು ಎಲ್ಲ ವರ್ಗದ ಜನರಿಗೂ ಹಂಚಿಕೆಯಾಗಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಉದ್ದೇಶ ಹಾಗೂ ಮೈತ್ರಿ ಸರ್ಕಾರದ ಧ್ಯೇಯ ಎಂದರು.

ಮೈತ್ರಿ ಸರ್ಕಾರ ಜನಪರ ಸರ್ಕಾರವಾಗಿದ್ದು, ಸರ್ಕಾರದ ಸುಲಲಿತ ಚಾಲನೆಗಾಗಿ ರೂಪಿಸಿಕೊಂಡಿರುವ ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಸರ್ಕಾರ ಅಭಿವೃದ್ಧಿ ಸಾಧಿಸಲು ಮುಂದಾಗಿದೆ. ವರುಣನ ಕೃಪೆಯಿಂದ ಎಲ್ಲ ಕಡೆ ಉತ್ತಮ ಮಳೆಯಾಗಿದ್ದು, ಜಲಾಶಯಗಳು ತುಂಬಿವೆ. ಜಿಲ್ಲೆಯಲ್ಲೂ ಕೂಡ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಹರ್ಷ ತಂದಿದೆ ಎಂದು ಹೇಳಿದರು. ಈ ವರ್ಷ 1,50,560 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 89,883 ಹೆಕ್ಟೇರ್‍ಗಳಲ್ಲಿ ಬಿತ್ತನೆ ಮಾಡಲಾಗಿದೆ. ಶ್ರೀಕ್ಷೇತ್ರದಲ್ಲಿ ರೋಬೋಟ್, ಡ್ರೋಣ್ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ಉದ್ದೇಶಿಸಿದೆ. ನೀರಾವರಿಯಲ್ಲಿ ಸೆನ್ಸಾರ್ ಬಳಕೆ ಮಾಡಿ ನೀರಿನ ಅವಶ್ಯಕತೆ ತಿಳಿಯಬಹುದಾಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆ ಸುಲಲಿತವಾದ ಜಿಲ್ಲೆ. ಅಪಾರ ಪರಿಸರ ಪ್ರದೇಶವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕೂಡ ತನ್ನದೇ ಆದ ಕೊಡುಗೆ ನೀಡಿದ ಜಿಲ್ಲೆ. ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರು ಅವರದೇ ಆದ ಕೊಡುಗೆ ನೀಡಿದ್ದಾರೆ. ಗೋಪಾಲಕೃಷ್ಣ ಅಡಿಗ ಅವರು ನುಡಿದಂತೆ ನಡೆವ ಸರ್ಕಾರ ನಮ್ಮದಾಗಿದ್ದು, ಇದಕ್ಕೆ ಜನರು ಕೈ ಜೋಡಿಸಬೇಕೆಂದು ಹೇಳಿದರು. ಸಮಾರಂಭದಲ್ಲಿ ಶಾಸಕ ಸಿ.ಟಿ.ರವಿ, ಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಜಯಣ್ಣ, ನಗರಸಭಾ ಅಧ್ಯಕ್ಷೆ ಶಿಲ್ಪಾ , ಜಿಲ್ಲಾಧಿಕಾರಿ ಶ್ರೀರಂಗಯ್ಯ, ಎಸ್‍ಪಿ ಲಕ್ಷ್ಮಿಪ್ರಸಾದ್, ಜಿಪಂ ಸಿಇಒ ಸತ್ಯಭಾಮಾ ಸೇರಿದಂತೆ ಹಲವಾರು ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin