ಲವಲವಿಕೆಯಿಂದ ಓಡಾಡಿದ ‘ನಡೆದಾಡುವ ದೇವರು’

ಈ ಸುದ್ದಿಯನ್ನು ಶೇರ್ ಮಾಡಿ

Shiddaganga-Shree
ತುಮಕೂರು, ಆ.14- ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳು ಸಂಪೂರ್ಣವಾಗಿ ಲವಲವಿಕೆಯಿಂದ ಇದ್ದಾರೆ. ಇತ್ತೀಚೆಗೆ ಕೊಂಚ ಅನಾರೋಗ್ಯಕ್ಕೀಡಾಗಿದ್ದ 111ರ ಹರೆಯದ ಡಾ.ಶ್ರೀ ಶಿವಕುಮಾರಸ್ವಾಮಿಯವರು ಈಗ ಯಾರ ನೆರವಿಲ್ಲದೆ ಯುವಕರನ್ನು ನಾಚಿಸುವಂತೆ ನಡೆದಾಡುತ್ತಾ ಬೆರಗು ಮೂಡಿಸಿದ್ದಾರೆ.

ಹಳೇ ಮಠದಿಂದ ಹೊಸ ಮಠಕ್ಕೆ ತೆರಳುವ ವೇಳೆ ಯಾರ ಸಹಾಯವೂ ಇಲ್ಲದೆ ಹೆಜ್ಜೆ ಹಾಕಿ ಭಕ್ತ ವೃಂದವನ್ನು ಪುಳಕಗೊಳಿಸಿದ್ದಾರೆ. ಅನಾರೋಗ್ಯದಿಂದ ಕೆಲ ಕಾಲ ಚಿಕಿತ್ಸೆಯಲ್ಲಿದ್ದ ಶ್ರೀಗಳು ಪರಿಚಾರಿಕರ ನೆರವಿನೊಂದಿಗೆ ಕಾರಿನಲ್ಲಿ ಓಡಾಡುತ್ತಿದ್ದರು. ಈ ನಡುವೆ ಇಂದು ಬೆಳಗ್ಗೆ ಸ್ವತಃ ತಾವೇ ಊರುಗೋಲಿನ ಸಹಾಯದಿಂದ ನಡೆದಿದ್ದಾರೆ. ಭಕ್ತಾದಿಗಳು ಶ್ರೀಗಳು ನಡೆದಾಡುವುದನ್ನು ಕಂಡು ಮೊಬೈಲ್‍ನಲ್ಲಿ ಸೆರೆಹಿಡಿದು ಸಂತೋಷ ಪಟ್ಟಿದ್ದಾರೆ.

ಶಿಸ್ತಿನ ಸಿಪಾಯಿಯಂತೆ ಹಳೇ ಮಠದಿಂದ ಹೊಸ ಮಠಕ್ಕೆ ಬಂದ ಶ್ರೀಗಳನ್ನು ನೋಡಿದ ಭಕ್ತರು ಕುಣಿದು ಕುಪ್ಪಳಿಸಿದರು. ಇಂದು ಬೆಳಗ್ಗೆ ವಾಹನವನ್ನು ತಿರಸ್ಕರಿಸಿ ಸ್ವತಃ ಶ್ರೀಗಳೇ ನಡೆದುಕೊಂಡೇ ಬರುವುದಾಗಿ ಹೇಳಿ ತಮ್ಮ ಪಾದುಕೆಗಳನ್ನು ಧರಿಸಿ ನಡೆದೇ ಬಂದು ಮಿಂಚಿನ ಸಂಚಾರ ಉಂಟು ಮಾಡಿದರು.  ಮಠದ ಆಡಳಿತ ಮಂಡಳಿ ಯವರಲ್ಲಿ ಆಶ್ಚರ್ಯ ಉಂಟು ಮಾಡಿತ್ತು. ಶ್ರೀಗಳ ನಡಿಗೆ ಅಂತರ್ಜಾಲದಲ್ಲಿ ವೈರಲ್ ಆಗಿ ದೇಶ-ವಿದೇಶಗಳಲ್ಲಿರುವ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರು ಶ್ರೀಗಳ ಉಲ್ಲಾಸಕ್ಕೆ ಫುಲ್ ಖುಷಿಯಾಗಿದ್ದಾರೆ.

Facebook Comments