ಇಂಡೋನೆಷ್ಯಾದಲ್ಲಿ 2018ರ ಏಷ್ಯನ್ ಗೇಮ್ಸ್’ಗೆ ಅಖಾಡ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Ai=sian-Game-s-01
ಜಕಾರ್ತ, ಆ.15-ದ್ವೀಪರಾಷ್ಟ್ರ ಇಂಡೋನೆಷ್ಯಾದಲ್ಲಿ 18ನೇ ಏಷ್ಯಾ ಕ್ರೀಡಾಕೂಟಕ್ಕೆ ಅಖಾಡ ಸಜ್ಜಾಗಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2ರವರೆಗೆ ಕ್ರೀಡಾ ಹಬ್ಬ ಜರುಗಲಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಧಾನಿ ಜಕಾರ್ತ ಮತ್ತು ಪಲೆಮ್‍ಬ್ಯಾಂಗ್ ನಗರಗಳಲ್ಲಿ ನಡೆಯುವ ಏಷ್ಯನ್ ಗೇಮ್ಸ್‍ನಲ್ಲಿ 40 ಕ್ರೀಡಾ ವಿಭಾಗಗಳಲ್ಲಿ ಒಟ್ಟು 465 ಸ್ಪರ್ಧೆಗಳು ನಡೆಯಲಿವೆ. 45 ದೇಶಗಳ 11,000ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲಲು ತೀವ್ರ ಪೈಪೋಟಿ ನಡೆಸಲಿದ್ದಾರೆ. ಏಷ್ಯಾದ ಶಕ್ತಿ ಎಂಬುದು ಈ ಕ್ರೀಡಾಕೂಟದ ಧ್ಯೇಯವಾಕ್ಯವಾಗಿದೆ.

ಆಗಸ್ಟ್ 17 ಇಂಡೋನೆಷ್ಯಾದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಸಡಗರ. ಅದರ ಮರು ದಿನದಿಂದಲೇ ಏಷ್ಯಾದ ಅತಿದೊಡ್ಡ ಕ್ರೀಡಾಕೂಟಕ್ಕೆ ದ್ವೀಪರಾಷ್ಟ್ರ ಆತಿಥ್ಯ ವಹಿಸಲಿದೆ. ರಾಜಧಾನಿ ಜಕಾರ್ತದ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಆ.18ರಂದು ಏಷ್ಯಾ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನಾ ಸಮಾರಂಭ ಜರುಗಲಿದೆ.

ಎರಡು ನಗರಗಳು ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಿರುವುದು ಇದೇ ಮೊದಲು. 1962ರ ನಂತರ ಜಕಾರ್ತದಲ್ಲಿ ಏಷ್ಯಾ ಕ್ರೀಡಾಕೂಟ ನಡೆಯುತ್ತಿದೆ. ದಕ್ಷಿಣ ಸುಮಾತ್ರದ ಪ್ರಾಂತೀಯ ರಾಜಧಾನಿ ಪಲೆಮ್‍ಬ್ಯಾಂಗ್ ನಗರಿಯೂ ಕ್ರೀಡಾಹಬ್ಬದ ಆತಿಥ್ಯ ವಹಿಸುತ್ತಿರುವುದು ವಿಶೇಷ. ಇದೇ ಮೊದಲ ಬಾರಿಗೆ ಇ-ಕ್ರೀಡೆಗಳು ಮತ್ತು ಕನೋಯಿ ಪೆಪೋಲೋ ಸ್ಪರ್ಧೆಗಳನ್ನು ಪ್ರದರ್ಶನ ರೂಪದಲ್ಲಿ ಆಯೋಜಿಸಲಾಗುತ್ತಿದೆ. ಈ ಕ್ರೀಡೆಗಳು 2022ರ ಏಷ್ಯನ್ ಗೇಮ್ಸ್‍ನಲ್ಲಿ ಪದಕ ಸ್ಪರ್ಧೆಗಳಾಗಿ ಪರಿಚಯವಾಗುವ ನಿರೀಕ್ಷೆ ಇದೆ.

ಈ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ಏಷ್ಯಾ ಖಂಡದ 45 ದೇಶಗಳ ಸ್ಪರ್ಧಿಗಳು ಭಾಗವಹಿಸಿ ಉತ್ತಮ ಸಾಮಥ್ರ್ಯ-ಸಾಧನೆಯೊಂದಿಗೆ ಪದಕಗಳನ್ನು ಗೆಲ್ಲಲು ತುದಿಗಾಲಲ್ಲಿ ನಿಂತಿದ್ದಾರೆ.   ಭಾರತದಿಂದ ಕ್ರೀಡಾಪಟುಗಳೂ ಸೇರಿದಂತೆ ಒಟ್ಟು 690 ಮಂದಿಯ ನಿಯೋಗ ಇಂಡೋನೆಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಕ್ರೀಡಾಪಟುಗಳು, ತರಬೇತುದಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಗಳು ವಾಸ್ತವ್ಯ ಹೂಡಲು ಜಕಾರ್ತದ ಕೆಮೊಯೊರನ್ ಹಾಗೂ ಪಲೆಮ್‍ಬ್ಯಾಂಗ್‍ನ ಜಕಾಬರಿಂಗ್ ಕ್ರೀಡಾ ನಗರಿಯಲ್ಲಿ ಅಥ್ಲೆಟಿಕ್ಸ್ ಗ್ರಾಮಗಳನ್ನು ನಿರ್ಮಿಸಲಾಗಿದೆ. 10 ಹೆಕ್ಟೇರ್ ಪ್ರದೇಶದ ಈ ಸ್ಥಳದಲ್ಲಿ 10 ಮಹಡಿಗಳ 7,424 ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಒಟ್ಟು 22,272 ಜನರಿಗೆ ಸ್ಥಳಾವಕಾಶ ಲಭ್ಯ. ಸೆಪ್ಟೆಂಬರ್ 2ರಂದು ಜಕಾರ್ತದ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ 18ನೇ ಏಷ್ಯನ್ ಕ್ರೀಡಾಕೂಟಕ್ಕೆ ತೆರೆಬೀಳಲಿದೆ.

16 ದಿನಗಳ ಕ್ರೀಡೋತ್ಸವಕ್ಕಾಗಿ ಇಂಡೋನೆಷ್ಯಾದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉಗ್ರರ ದಾಳಿಯ ಆತಂಕದ ಹಿನ್ನೆಲೆಯಲ್ಲಿಯೂ ವಿಶೇಷ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ. ಭಯೋತ್ಪಾದನೆ ನಿಗ್ರಹ ದಳದ ಕಮ್ಯಾಂಡೋಗಳು ಹಾಗೂ ಶಾರ್ಪ್‍ಶೂಟರ್‍ಗಳನ್ನು ಕ್ರೀಡಾಂಗಣಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಲಾಗಿದೆ.

Facebook Comments

Sri Raghav

Admin