ಸೈಬರ್ ಅಪರಾಧಗಳನ್ನು ಮಟ್ಟ ಹಾಕಲು ಪ್ರತ್ಯೇಕ ಇಲಾಖೆ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

Cyber-Crime

ತುಮಕೂರು,ಆ.15- ಸೈಬರ್ ಅಪರಾಧಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಇಂಥ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ರತ್ಯೇಕ ಇಲಾಖೆಯ ಅಗತ್ಯವಿದೆ. ಇನ್ಫೋಸಿಸ್ ಸಂಸ್ಥೆಯ ಜೊತೆ ಈಗಾಗಲೇ ಸೈಬರ್ ಅಪರಾಧ ತಡೆ ಸಂಬಂಧ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕಲು ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಈಗಾಗಲೇ ಹಲವು ಅಕ್ರಮ ವಲಸಿಗರನ್ನು ಗುರುತಿಸಿ ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ನೆಲೆಸಿರುವ ಬಾಂಗ್ಲಾ ಮತ್ತು ಇತರ ದೇಶಗಳ ಪ್ರಜೆಗಳು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಅಂಥವರನ್ನು ಗುರುತಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. 34 ಟಿಎಂಸಿ ನೀರಿಗಾಗಿ ಕರ್ನಾಟಕ ಬೇಡಿಕೆ ಇಟ್ಟಿತ್ತು. ಆದರೆ ಕೇವಲ 13. 5 ಟಿಎಂಸಿ ಮಾತ್ರ ನೀರು ಹಂಚಿಕೆ ಮಾಡಲಾಗಿದೆ. ಗೋವಾಕ್ಕೆ ಸಿಂಹಪಾಲು ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇದೆ ಎಂಬ ಆರೋಪದ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ. ಮಹದಾಯಿ ಸಮಸ್ಯೆ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ನ್ಯಾಯಾಧೀಕರಣದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು.

ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಮಹದಾಯಿ ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ತೀರ್ಪಿನಲ್ಲಿ ಸಂಪೂರ್ಣ ನ್ಯಾಯ ಸಿಗದಿದ್ದರೂ ಅಲ್ಪ ತೃಪ್ತಿಯಿದೆ ಎಂದು ಹೇಳಿದರು. ತುಮಕೂರಿನಲ್ಲಿ ಭಯೋತ್ಪಾದಕ ಚಟುವಟಿಕೆ, ಡ್ರಗ್ಸ್ ಮಾಫಿಯ ನಡೆಯುತ್ತಿದೆ ಎಂಬ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸೊಗಡು ಶಿವಣ್ಣ ಅವರು ಈ ಸಂಬಂಧ ನಿರ್ದಿಷ್ಟ ದಾಖಲೆಗಳಿದ್ದರೆ ಗೃಹ ಇಲಾಖೆಗೆ ಸಲ್ಲಿಸಲಿ. ಆಧಾರ ರಹಿತ ಆರೋಪ ಮಾಡಬಾರದು. ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಯಾವುದೇ ಉಗ್ರ ಚಟುವಟಿಕೆಗಳು ನಡೆಯುತ್ತಿಲ್ಲ. ಒಂದು ವೇಳೆ ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಅವುಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದರು.

ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಅಪಾರ ಆಸ್ತಿಪಾಸ್ತಿ ಜೀವಹಾನಿಯಾಗಿದೆ. ಆದರೂ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ. ಈ ಜಿಲ್ಲೆಗಳಲ್ಲಿ ನೀರು ಮತ್ತು ಮೇವಿಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಹಣಕಾಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

Facebook Comments

Sri Raghav

Admin