ಮಾಜಿ-ಹಾಲಿ ಸಿಎಂಗಳು ಮುಖಾಮುಖಿಯಾದರೂ ಮಾತಿಲ್ಲ ಕತೆಯಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Vs-Siddaramaiah

ಬೆಂಗಳೂರು, ಆ.15-ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ 221ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಖೋಡೇಸ್ ವೃತ್ತದಲ್ಲಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.  ಕಾರ್ಯಕ್ರಮಕ್ಕೆ ಒಬ್ಬರಾದ ಮೇಲೆ ಒಬ್ಬರು ಸರತಿಯಂತೆ ಆಗಮಿಸಿದ ಉಭಯ ಮುಖಂಡರು ಪರಸ್ಪರ ಭೇಟಿ ಮಾಡುವ ಅವಕಾಶವಿದ್ದರೂ, ಸಂದಿಸದೆ ತಮ್ಮ ಪಾಡಿಗೆ ತಾವು ತೆರಳಿದ್ದು ಅಚ್ಚರಿ ಮೂಡಿಸಿತ್ತು.  ಸಂಗೊಳ್ಳಿರಾಯಣ್ಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅವರ ಹಿಂದೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದರು. ಅದರ ಮಾಹಿತಿ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಕಾರ್ಯಕ್ರಮದಿಂದ ನಿರ್ಗಮಿಸಲಾರಂಭಿಸಿದರು. ಅವರು ಕಾರಿನ ಬಳಿ ಬರುವ ವೇಳೆಗೆ ಸರಿಯಾಗಿ ಕುಮಾರಸ್ವಾಮಿ ಕೂಡ ಅದೇ ಸ್ಥಳಕ್ಕೆ ಬಂದರು. ಆದರೆ ಇಬ್ಬರು ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಸಿದ್ದರಾಮಯ್ಯನವರ ಸುತ್ತ ಜನ ಸುತ್ತಿಕೊಂಡರು ತಮ್ಮ ಕಾರಿನ ಫುಟ್‍ಬೋರ್ಡ್ ಮೇಲೆ ನಿಂತು ಸಿದ್ದರಾಮಯ್ಯ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು.

ಜನ ಜಮಾಯಿಸಿದ್ದರಿಂದ ಮುಖ್ಯಮಂತ್ರಿಯವರ ಕಾರು ಮೂರ್ನಾಲ್ಕು ನಿಮಿಷ ಮುಂದೆ ಚಲಿಸಲಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ಕುಮಾರಸ್ವಾಮಿ ಕೂಡ ಕಾರಿನಿಂದ ಕೆಳಗಿಳಿಯದೆ ತಮ್ಮ ಪಾಡಿಗೆ ತಾವಿದ್ದರು. ಸಿದ್ದರಾಮಯ್ಯ ತೆರಳಿದ ಮೇಲೆ ಕುಮಾರಸ್ವಾಮಿ ಮುಂದೆ ತೆರಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮ ಪಾಡಿಗೆ ತಾವು ತೆರಳಿದರು.

Facebook Comments

Sri Raghav

Admin