ಮಹದಾಯಿ ತೀರ್ಪಿನ ಬಗ್ಗೆ ದೇವೇಗೌಡ್ರು ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

 

Devegowda--01
ನವದೆಹಲಿ, ಆ.15-ಮಹದಾಯಿ ನ್ಯಾಯಾಧೀಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಎಲ್ಲಿ ಅನ್ಯಾಯವಾಗಿದೆ ಎಂಬುದನ್ನು ಪರಿಚಯ ಮಾಡಿ ಮುಂದಿನ ಕಾನೂನು ಹೋರಾಟವನ್ನು ನಿರ್ಧರಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪರವಾಗಿ ವಾದ ಮಾಡುತ್ತಿದ್ದ ಹಿರಿಯ ವಕೀಲ ಮೋಹನ್ ಕಾತರಕಿ ಅವರು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಎರಡು ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಆ ವಿಷಯವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವುದಾಗಿ ಅವರು ಅಭಿಪ್ರಾಯ ತಿಳಿಸಿದ್ದಾರೆ.

ನಾನು ಇನ್ನು ನ್ಯಾಯಾಧೀಕರಣದ ತೀರ್ಪಿನ ಪ್ರತಿಯನ್ನು ನೋಡಿಲ್ಲ.ನ್ಯಾಯಾಧೀಕರಣದಲ್ಲಿ ನಡೆದ ವಿಚಾರಣೆಯ ಸಂಪೂರ್ಣ ಮಾಹಿತಿಯನ್ನು ತರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದ್ದೇನೆ. ಒಂದು ವಾರ ತಡವಾದರೂ ಪರವಾಗಿಲ್ಲ. ತೀರ್ಪಿನ ಸಂಪೂರ್ಣ ಅಧ್ಯಯನ ಮಾಡಿದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ನಾನು ನನ್ನ ಅನುಭವದ ಆಧಾರದ ಮೇಲೆ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತೇನೆ. ಇಲ್ಲಿ ಪಕ್ಷಪಾತ ಇಲ್ಲ. ರಾಜ್ಯಕ್ಕೆ ನ್ಯಾಯ ಸಿಗಬೇಕು. ಇದು ನಮ್ಮ ಉದ್ದೇಶ ಎಂದರು.

ಗೋವಾ ರಾಜ್ಯ ಸುಪ್ರೀಂಕೋರ್ಟ್‍ಗೆ ಅಥವಾ ಮಹದಾಯಿ ನ್ಯಾಯಾಧೀಕರಣದ ಎದುರೇ ಮೇಲ್ಮನವಿ ಸಲ್ಲಿಸುವುದಾಗಿ ಹೇಳುತ್ತಿದೆ. ಅವರು ಮೇಲ್ಮನವಿ ಸಲ್ಲಿಸುವಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ತೀರ್ಪು ಪ್ರಕಟಗೊಂಡ ನಂತರ ಮಹದಾಯಿ ಭಾಗದ ರೈತರು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ತೀರ್ಪಿನಿಂದ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂಬ ಅಭಿಪ್ರಾಯವಿದೆ. ಪರಿಶೀಲನೆ ಮಾಡದ ಹೊರತು ಯಾವುದೇ ಅಭಿಪ್ರಾಯವನ್ನು ಹೇಳುವುದಿಲ್ಲ ಎಂದು ಹೇಳಿದರು.

Facebook Comments

Sri Raghav

Admin