ಸ್ವಾತಂತ್ರ್ಯ ವೀರರ ಸ್ಮರಿಸುತ್ತಾ ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ

ಈ ಸುದ್ದಿಯನ್ನು ಶೇರ್ ಮಾಡಿ

Indeipandent
ವಾಸುದೇವಮೂರ್ತಿ

(ಹಿಂದಿನ ಸಂಚಿಕೆಯಿಂದ)
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ಧ ದಿನೇ ದಿನೇ ಪ್ರತಿಭಟನೆ ಮತ್ತು ಹೋರಾಟದ ಕಿಚ್ಚು ವ್ಯಾಪಿಸುತ್ತಿದ್ದಂತೆ ಭಾರತೀಯರ ಕುಂದು-ಕೊರತೆಗಳನ್ನು ಆಲಿಸಲು ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ನೇತೃತ್ವದ ಆಯೋಗ ಕಳುಹಿಸಿತು.ಆದರೆ, ಇದು ಶ್ವೇತ ವರ್ಣಿಯರ ಆಯೋಗವಾಗಿತ್ತು. ಇದರಿಂದ ಭಾರತೀಯರು ಈ ಆಯೋಗವನ್ನು ಬಹಿಷ್ಕರಿಸಿದರು. ಈ ಆಯೋಗವು ಲಾಹೋರ್‍ಗೆ ಬಂದಾಗ ಪಂಜಾಬ್ ಕೇಸರಿ ಎಂದೇ ಜನಜನಿತರಾಗಿದ್ದ ಲಾಲಾ ಲಜಪತರಾಯ್ ಮತ್ತು ಇತರರು ಆಯೋಗದ ವಿರುದ್ದ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಹಿಮ್ಮೆಟ್ಟಿಸಲು ಬ್ರಿಟಿಷರು ಬಲಪ್ರಯೋಗ ಮಾಡಿದರು. ತೀವ್ರ ಸ್ವರೂಪದ ಲಾಠಿ ಏಟು ಬಿದ್ದ ಲಾಲಾಜಿ ಸಾವಿಗೀಡಾದರು. ನನ್ನ ಮೈಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಬ್ರಿಟಿಷ್ ಚಕ್ರಾಧಿಪತ್ಯದ ಶವದ ಪೆಟ್ಟಿಗೆಯ ಒಂದೊಂದು ಮೊಳೆಯಾಗಲಿದೆ ಎಂದು ಅವರು ಸಾವಿನ ದವಡೆಯಲ್ಲೂ ಕೆಚ್ಚೆದೆಯ ಘೋಷಣೆ ಸಾರಿದರು.

ಭಾರತ ರಾಷ್ಟ್ರೀಯ ಕಾಂಗ್ರೆಸ್1929ರ ಡಿಸೆಂಬರ್‍ನಲ್ಲಿ ಲಾಹೋರ್ ಅಧಿವೇಶನದಲ್ಲಿ ಜವಾಹರ್‍ಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿತು. ಅದು ದೇಶಾದ್ಯಂತ ನಾಗರಿಕ ಅಸಹಕಾರ ಚಳವಳಿ ಆರಂಭಿಸಲು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿತು. 26ನೆ ಜನವರಿ 1920ಅನ್ನು ಪೂರ್ಣ ಸ್ವರಾಜ್ಯ ದಿನ ಎಂದು ದೇಶಾದ್ಯಂತ ಆಚರಿಸಲು ನಿರ್ಧರಿಸಲಾಯಿತು. ಭಾರತ ಅನೇಕ ವೈವಿಧ್ಯಮಯ ರಾಜಕೀಯ ಪಕ್ಷಗಳು ಮತ್ತು ಕ್ರಾಂತಿಕಾರಿಗಳು ಆ ದಿನವನ್ನು ಅಭಿಮಾನ, ಗೌರವದಿಂದ ಆಚರಿಸಲು ಸಿದ್ಧರಾದರು. ಉಪ್ಪಿನ ಮೇಲೆ ಬ್ರಿಟಿಷರ ತೆರಿಗೆಗಳನ್ನು ಪ್ರತಿಭಟಿಸಿ, ದಂಡಿಯಲ್ಲಿ ಗಾಂಧೀಜಿಯವರು ಮತ್ತು ಅವರ ಸಾವಿರಾರು ಅನುಯಾಯಿಗಳು ಸಮುದ್ರ ನೀರಿನಿಂದ ತಮ್ಮದೇ ಆದ ಉಪ್ಪು ತಯಾರಿಸಿ ಕಾನೂನು ಮುರಿದರು. ಈ ನಡಿಗೆಯು ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಗಾಂಧಿಯವರು ಜೈಲಿನಲ್ಲಿದ್ದಾಗ ಲಂಡನ್‍ನಲ್ಲಿ 1930ರ ನವೆಂಬರ್‍ನಲ್ಲಿ ಮೊದಲು ದುಂಡು ಮೇಜಿನ ಪರಿಷತ್ತು ನಡೆಯಿತು. ಅದರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಾತಿನಿಧ್ಯ ಇರಲಿಲ್ಲ. ಸತ್ಯಾಗ್ರಹದಿಂದ ಉಂಟಾದ ಆರ್ಥಿಕ ಸಂಕಷ್ಟಗಳಿಂದಾಗಿ ಕಾಂಗ್ರೆಸ್ ಮೇಲಿನ ನಿಷೇಧವನ್ನು ತೆಗೆದು ಹಾಕಲಾಯಿತು. ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರನ್ನು ಜೈಲಿನಿಂದ 1931ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. 1931ರ ಮಾರ್ಚ್‍ನಲ್ಲಿ ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರ್ಕಾರ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿತು. ಪ್ರತಿಯಾಗಿ ಗಾಂಧಿಯವರು ನಾಗರಿಕ ಅಸಹಕಾರ ಆಂದೋಲನ ಮುಂದು ವರಿಸದಿರಲು ಮತ್ತು ಎರಡನೆ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್‍ನ ಏಕೈಕ ಪ್ರತಿನಿಧಿಯಗಿ ಭಾಗವಹಿಸಲು ಒಪ್ಪಿದರು.

bhagath-sing

ವೀರ ಭಗತ್ ಸಿಂಗ್
1914ರಲ್ಲಿ ಪ್ರಾರಂಭವಾದ ಮೊದಲನೆ ಮಹಾಯುದ್ಧವು ಕ್ರಾಂತಿಕಾರಿ ಚಟುವಟಿಕೆಗಳಿಗೆ ಪೂರಕವಾಯಿತು. ಕ್ರಾಂತಿಕಾರಿಗಳು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಜರ್ಮನಿಯಿಂದ ತರಿಸಿಕೊಂಡು ಬ್ರಿಟಿಷರ ವಿರುದ್ದ ಸಶಸ್ತ್ರ ಬಂಡಾಯ ಹೂಡಲು ಯೋಜಿಸಿದರು. ಮೊದಲನೆ ಮಹಾಯುದ್ಧದ ನಂತರ ಅನೇಕ ಪ್ರಮುಖ ನಾಯಕರ ಬಂಧನದಿಂದಾಗಿ ಕ್ರಾಂತಿಕಾರಿ ಚಟುವಟಿಕೆಗಳು ಹಿನ್ನಡೆ ಅನುಭವಿಸಿದವು. 1920ರ ಹೊತ್ತಿಗೆ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾದರು. ಚಂದ್ರಶೇಖರ್ ಆಜಾದ್ ನೇತೃತ್ವದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ 1929ರ ಅಕ್ಟೋಬರ್ 8ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆ ಅಂಗೀಕರಿಸುವುದನ್ನು ಪ್ರತಿಭಟಿಸಿ, ಸ್ಫೋಟಕವನ್ನು ಎಸೆದರು, ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆಯ ವಿಚಾರಣೆ ನಂತರ ಭಗತ್‍ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರಂದು ಗಲ್ಲಿಗೇರಿಸಲಾಯಿತು.

ದೇಶದ ಗೌರವ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಹೆಮ್ಮೆಯ ಪುತ್ರ. ಶಸ್ತ್ರಾಸ್ತ್ರ ಹೋರಾಟದ ಮೂಲಕ ಬ್ರಿಟಿಷ್ ದುರಾಡಳಿತವನ್ನು ಕೊನೆಗಾಣಿಸಲು ನೇತಾಜಿ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರು. ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಗಿದ್ದು ದೊಡ್ಡ ದುರಂತ.
1939ರಲ್ಲಿ ಯುದ್ಧವು ಆರಂಭವಾದಾಗ ವಾರ್ಧಾದಲ್ಲಿ ಸೇರಿದ್ದ ಕಾಂಗ್ರೆಸ್ ಪಕ್ಷದ ನಾಯಕತ್ವ ಭಾರತಕ್ಕೆ ಸ್ವಾತಂತ್ರ್ಯ ನೀಡಿದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡುವಂತೆ ನಿಶ್ಚಯಿಸಿ ದರು. ಸ್ವಾತಂತ್ರ್ಯದ ಷರತ್ತನ್ನು ಬ್ರಿಟಿಷರು ಒಪ್ಪದ ಕಾರಣ 1942ರ ಆಗಸ್ಟ್‍ನಲ್ಲಿ ಕಾಂಗ್ರೆಸ್ ಕೂಡಲೇ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿ ಭಾರತ ಬಿಟ್ಟು ತೊಲಗಿ ಎಂಬ ನಾಗರಿಕ ಅಸಹಕಾರ ಆಂದೋಲನಕ್ಕೆ ಕರೆ ನೀಡಿತು.

ಮುಂಬೈನಲ್ಲಿ ಗಾಂಧೀಜಿಯವರು ಈ ಕರೆಯನ್ನು ಬೆಂಬಲಿಸಿ ಶಾಂತಿಯುತವಾಗಿ ಸರ್ಕಾರಕ್ಕೆ ಅಸಹಕಾರಿಯಾಗಿ ವರ್ತಿಸಬೇಕೆಂದು ಭಾರತೀಯರನ್ನು ಕೋರಿದರು. ಗಾಂಧೀಜಿಯವರ ಕರೆಯ 24 ಗಂಟೆಗಳಲ್ಲಿ ಕಾಂಗ್ರೆಸ್‍ನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. ಅನೇಕರನ್ನು ಯುದ್ದ ಮುಗಿಯುವ ತನಕ ಬಿಡುಗಡೆಗೊಳಿಸಲಿಲ್ಲ. ಸಾಮೂಹಿಕ ಬಂಧನಕ್ಕೆ ಭಾರತದಲ್ಲೆಲ್ಲಾ ಪ್ರತಿಭಟನೆಗಳು ನಡೆದವು.

ಭಾರತೀಯ ನೌಕಾಪಡೆಯ ದಂಗೆ
ಮುಂಬೈ ಬಂದರಿನಲ್ಲಿ 1946ರ ಫೆಬ್ರವರಿ 18ರಲ್ಲಿ ಭಾರತೀಯ ನೌಕಾಪಡೆಯ ನಾವಿಕರು ದಂಗೆ ಎದ್ದರು. ಈ ದಂಗೆ ಕರಾಚಿ ಮತ್ತು ಕೋಲ್ಕತ್ತಾ ಬಂದರುಗಳಿಗೂ ಹರಡಿತು. ಒಟ್ಟು 78 ಹಡಗುಗಳು ಮತ್ತು 20,000 ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು. ಬ್ರಿಟಿಷ್ ಅಧಿಕಾರಿಗಳ ಜನಾಂಗೀಯ ನೀತಿ ಮತ್ತು ವರ್ಣಭೇದ ತೋರುವ ನಡವಳಿಕೆ, ಸಾಮಾನ್ಯ ಜೀವನ ಸ್ಥಿತಿಗಳು ಈ ದಂಗೆಗೆ ಕಾರಣವಾದವು.  ವಾಯು ಸೇನೆ ಮತ್ತು ಮುಂಬೈ ಪೊಲೀಸ್ ಪಡೆ ಕೂಡ ದಂಗೆಯಲ್ಲಿ ಪಾಲ್ಗೊಂಡವು. ಮದ್ರಾಸ್ ಮತ್ತು ಪೂನಾಗಳಲ್ಲಿ ಸೇನಾ ತುಕಡಿಗಳು ಕೂಡ ಬಂಡಾಯದ ಬಾವುಟ ಹಾರಿಸಿದವು.

ಎರಡನೆ ಮಹಾ ಸಂಗ್ರಾಮದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆ ತೆತ್ತ ಬ್ರಿಟಿಷ್ ಸಾಮ್ರಾಜ್ಯ ಒಂದೆಡೆ ಅಸಹಕಾರ ಚಳವಳಿ, ಇನ್ನೊಂದೆಡೆ ಸೇನೆಯ ದಂಗೆಯಂಥ ಆಂದೋಲನದಿಂದ ಎಚ್ಚೆತ್ತ ಬ್ರಿಟೀಷರಿಗೆ ಭಾರತೀಯರನ್ನು ಸದೆಬಡಿಯುವ ಬಲ ಇರಲಿಲ್ಲ. ಇದನ್ನು ಬ್ರಿಟಿಷ್ ಸಾಮ್ರಾಜ್ಯ ಅರಿತುಕೊಂಡಿತು. 1946ರ ಮಧ್ಯದೊಳಗೆ ಎಲ್ಲ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರನ್ನು ಸರ್ಕಾರ ವಿಮೋಚನೆಗೊಳಿಸಿತು.  ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿತು. ಜೂನ್ 3, 1947ರಂದು ಭಾರತದ ಕೊನೆಯ ಬ್ರಿಟಿಷ್ ಗೌರ್ನರ್ ಜನರಲ್ ಲಾರ್ಡ್ ಲೂಯಿ ಮೌ0ಟ್ ಬ್ಯಾಟನ್ ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆ ಪ್ರಕಟಿಸಿದರು.

1947ರ ಆಗಸ್ಟ್ 15ರಂದು ಅಧಿಕಾರ ಹಸ್ತಾಂತರ ಆಯಿತು. ಭಾರತ ಸ್ವತಂತ್ರ್ಯ ರಾಷ್ಟ್ರವಾಯಿತು. ತ್ರಿವರ್ಣ ಧ್ವಜ ಎಲ್ಲೆಡೆ ಸಡಗರ-ಸಂಭ್ರಮದಿಂದ ಹಾರಾಡಿತು.
ಭಾರತೀಯರ ಪಾಲಿಗೆ 30ನೆ ಜನವರಿ 1948 ಘೋರ ದುರಂತದ ದಿನವಾಯಿತು. ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕರಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನಾಥುರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು. 8ನೆ ನವೆಂಬರ್ 1949ರಲ್ಲಿ ಗೋಡ್ಸೆಯನ್ನು ನೇಣುಗಂಬಕ್ಕೆ ಏರಿಸಲಾಯಿತು. ಬ್ರಿಟಿಷರ ದಬ್ಬಾಳಿಕೆಯ ದಾಸ್ಯ ಸರಪಳಿ ಗಳಿಂದ ಭಾರತಾಂಬೆಯನ್ನು ಮುಕ್ತಿಗೊಳಿಸಲು ಹುತಾತ್ಮರು ನಡೆಸಿದ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಆನಂದವನ್ನು ಸವಿಯುತ್ತಿದ್ದೇವೆ. ಈ ವೀರರು, ಮತ್ತು ಪ್ರಾತಃಸ್ಮರಣೀಯರಿಗೆ ನಮ್ಮ ನಮನ ಸಲ್ಲಿಸುತ್ತ ಅವರನ್ನು ಮನದಲ್ಲಿ ಪ್ರತಿದಿನ ಹೆಮ್ಮೆಯಿಂದ ನೆನೆಯುತ್ತ ಭವ್ಯ ಭಾರತದ ನಿರ್ಮಾಣಕ್ಕೆ ನಾವೆಲ್ಲ ದೃಢ ಸಂಕಲ್ಪ ಮಾಡೋಣ.

(ಮುಗಿಯಿತು)

Facebook Comments

Sri Raghav

Admin