ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಹಾಲಿ-ಮಾಜಿ ಸಿಎಂಗಳ ನಡುವೆ ಮುಸುಕಿನ ಗುದ್ದಾಟ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-vs-Siddaramaiah

ಬೆಂಗಳೂರು,ಆ.15-ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಸಮೀಕ್ಷಾ ವರದಿ ಸಲ್ಲಿಕೆಗೆ ಸಿದ್ಧತೆ ನಡೆದಿರುವಾಗಲೇ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಸಾಕಷ್ಟು ವಿರೋಧದ ನಡುವೆಯೇ ಜಾತಿಗಣತಿ ಸಮೀಕ್ಷೆ ಮಾಡಿಸಿದ್ದರು. ಖುದ್ದು ಕುಮಾರಸ್ವಾಮಿ ಕೂಡ ಇದನ್ನು ವಿರೋಧಿಸಿದ್ದರು. ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಿರುವಾಗಲೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕದನಕ್ಕೆ ಕಾರಣವಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಸಮೀಕ್ಷಾ ಕಾರ್ಯ ಮುಗಿದು ವರುಷಗಳೇ ಕಳೆದಿವೆ. ಸುಮಾರು 190 ಕೋಟಿ ವೆಚ್ಚದಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈ ಸಮೀಕ್ಷೆಯನ್ನು ಮುಗಿಸಿ ವರದಿ ಸಹ ಸಿದ್ಧಪಡಿಸಿದೆ. ಆದರೆ, ಜಾತಿ ಸಮೀಕರಣವೇ ತಲೆಕೆಳಗಾಗುವಂತಹ ಸಮೀಕ್ಷಾ ವರದಿ ಸಿದ್ಧವಾಗಿದೆ. ಜಾತಿಗಳ ಕುರಿತ ಅಂಕಿ-ಸಂಖ್ಯೆ ಸಂಪೂರ್ಣ ಬದಲಾಗಿದೆ ಎಂದು ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜಾತಿಗಣತಿ ಸಮೀಕ್ಷೆಯ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತೋ, ಇಲ್ಲವೋ ಎಂಬ ಜಿಜ್ಞಾಸೆ ಮೂಡಿದೆ. ಒಂದು ಮೂಲದ ಪ್ರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ವರದಿಯ ಮುದ್ರಣ ಕೆಲಸ ಸಹ ಮುಗಿದಿದೆ. ಬರೋಬ್ಬರಿ 30 ಸಂಪುಟಗಳಿಗೂ ಹೆಚ್ಚು ವರದಿಯನ್ನು ಮುದ್ರಿಸಲಾಗಿದೆಯಂತೆ. ಇನ್ನೇನಿದ್ದರೂ ಸಲ್ಲಿಕೆಯೊಂದೇ ಬಾಕಿ. ಆದರೆ, ಸಿಎಂ ಕುಮಾರಸ್ವಾಮಿ ಮಾತ್ರ ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸಿಎಂ ಚರ್ಚೆಗೆ ಕರೆಯಲಿ ಎಂದು ಕಾಯುತ್ತಿದ್ದಾರೆ. ಈಗಾಗಲೇ ಸಿಎಂ ಭೇಟಿಗೆ ಪ್ರಯತ್ನ ಸಹ ನಡೆಸಿದ್ದಾರೆ. ಆದರೆ, ಕುಮಾರಸ್ವಾಮಿ ಮಾತ್ರ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

# ಸಚಿವರಿಗೆ ಸಿಎಂ ತರಾಟೆ:
ಇತ್ತೀಚೆಗೆ ಜಾತಿಗಣತಿ ಸಮೀಕ್ಷಾ ವರದಿ ಬಿಡುಗಡೆ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಪುಟ್ಟರಂಗ ಶೆಟ್ಟಿ, ಓಬಿಸಿ ಆಯೋಗದ ಸಭೆ ನಡೆಸಿದ್ದರು. ಇದು ಸಿಎಂ ಕಿವಿಗೆ ಬೀಳುತ್ತಿದ್ದಂತೆ ಕೆಂಡಾಮಂಡಲರಾಗಿದ್ದಾರೆ. ಸಚಿವರನ್ನು ತಮ್ಮ ಬಳಿಗೆ ಕರೆಸಿಕೊಂಡಿದ್ದ ಕುಮಾರಸ್ವಾಮಿ, ವರದಿ ಬಗ್ಗೆ ಯಾಕಿಷ್ಟು ಆತುರ, ತನ್ನ ಗಮನಕ್ಕೆ ತರದೇ ಸಭೆ ಯಾಕೆ ನಡೆಸಿದಿರಿ ಎಂದೆಲ್ಲಾ ಕೇಳಿ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಸಚಿವ ಪುಟ್ಟರಂಗಶೆಟ್ಟಿಯನ್ನು ತರಾಟೆಗೆ ತೆಗೆದುಕೊಳ್ಳಲು ಬೇರೆಯದ್ದೇ ಕಾರಣವಿದೆ ಎನ್ನಲಾಗಿದೆ. ಪುಟ್ಟರಂಗಶೆಟ್ಟಿ ಮಾಜಿ ಸಿಎಂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ. ಹಲವು ಬಾರಿ ಸಿದ್ದರಾಮಯ್ಯ ತಮ್ಮ ನಾಯಕರು, ತಮಗೆ ಅವರೇ ಸಿಎಂ ಎಂದೆಲ್ಲಾ ಹೇಳಿದ್ದರು. ಹಾಗಾಗಿ ಸಿದ್ದರಾಮಯ್ಯ ಒತ್ತಡದ ಕಾರಣ ಓಬಿಸಿ ಅಧಿಕಾರಿಗಳ ಸಭೆ ನಡೆಸಿದ್ಧಾರೆ ಎಂಬ ಅನುಮಾನ ಕಾಡಿದೆ. ಹಾಗಾಗಿಯೇ ತನಗೆ ಗೊತ್ತಿಲ್ಲದಂತೆ ಏನೇನೋ ನಡೆಯುತ್ತಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಕೆಂಡಾಮಂಡಲರಾಗಿದ್ದರಂತೆ.

# ಸಂಘರ್ಷಕ್ಕೆ ಕಾರಣವಾದ ವರದಿ :
ವರದಿ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆಯಾದರೂ ಇದಕ್ಕೆ ಬೇರೆಯದ್ದೇ ಆದ ಕಾರಣವಿದೆ. ತಮ್ಮ ಅವಧಿಯಲ್ಲಿ ನಡೆದಿರುವ ಮಹತ್ವಾಕಾಂಕ್ಷೆಯ ಸಮೀಕ್ಷಾ ವರದಿಯನ್ನು ಲೋಕಸಭಾ ಚುನಾವಣೆಗೂ ಮೊದಲೇ ಬಿಡುಗಡೆಯಾಗಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ವರದಿ ಬಿಡುಗಡೆಗೆ ಸಚಿವರ ಮೂಲಕ ಒತ್ತಡ ಹಾಕುತ್ತಿದ್ದಾರೆ ಎಂಬ ಅಸಮಾಧಾನ ಕುಮಾರಸ್ವಾಮಿ ಅವರದ್ದು. ಸಿದ್ದರಾಮಯ್ಯ ಅವಧಿಯಲ್ಲೇ ಸಮೀಕ್ಷೆ ಮುಗಿದು ಸಿದ್ಧವಾಗಿದ್ದರೂ ಬಿಡುಗಡೆ ಮಾಡಲು ರಾಜಕೀಯ ಕಾರಣಕ್ಕೆ ಹಿಂದೇಟು ಹಾಕಿದ್ದರು.
ಚುನಾವಣೆ ವೇಳೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ನಡೆಸಿದ್ದರು. ಆದರೆ, ಈಗ ಏಕಾಏಕಿ ಸಿದ್ದರಾಮಯ್ಯ ಬಿಡುಗಡೆಯಾಗಲೇಬೇಕೆಂದು ಪಟ್ಟು ಹಿಡಿದಿರುವುದು ಕುಮಾರಸ್ವಾಮಿ ಅವರನ್ನು ಕೆರಳುವಂತೆ ಮಾಡಿದೆ. ಯಾವುದೇ ಕಾರಣಕ್ಕೂ ವರದಿ ಬಿಡುಗಡೆ ಮಾಡುವುದು ಬೇಡವೆಂದು ನಿರ್ಧರಿಸಿದ್ದಾರೆ. ಹಾಗಾಗಿಯೇ ಹಿಂದುಳಿದ ವರ್ಗಗಳ ಆಯೋಗದ ಭೇಟಿಗೆ ಮುಖ್ಯಮಂತ್ರಿ ಅವಕಾಶವನ್ನೇ ನೀಡಿಲ್ಲಾ ಎನ್ನಲಾಗಿದೆ.

ಸಮೀಕ್ಷೆಯಲ್ಲಿ ಜಾತಿ ಲೆಕ್ಕಾಚಾರ ಅಚ್ಚರಿ ಮೂಡಿಸುವಂತೆ ಅಂಕಿ, ಅಂಶಗಳು ದಾಖಲಾಗಿವೆ. ಹಿಂದುಳಿದ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಜನಸಂಖ್ಯೆಯಲ್ಲಿ ದಲಿತರು ಅಗ್ರ ಸ್ಥಾನದಲ್ಲಿದ್ದರೆ ಮುಸ್ಲಿಂ, ಲಿಂಗಾಯತ ಬಳಿಕ ಒಕ್ಕಲಿಗ ಸಮುದಾಯವಿದೆ. ನಂತರದ ಸ್ಥಾನ ಕುರುಬರದ್ದು ಎನ್ನಲಾಗಿದೆ. ಜೆಡಿಎಸ್ ಗೆ ಬೆನ್ನೆಲುಬಾಗಿರುವ ಒಕ್ಕಲಿಗ ಸಮುದಾಯ ಐದನೇ ಸ್ಥಾನದಲ್ಲಿದೆ ಎಂಬ ಅಂಶ ಬಹಿರಂಗವಾಗಲಿದೆ. ಇದಕ್ಕಿಂತಲೂ ಲೋಕಸಭಾ ಚುನಾವಣೆಗೂ ಮೊದಲೇ ಬಿಡುಗಡೆಯಾದರೆ ಜೆಡಿಎಸ್ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಸಿಎಂ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ, ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತ್ತು. ಪಕ್ಷ ಅಧಿಕಾರ ಕಳೆದುಕೊಳ್ಳಲು ಇದೂ ಒಂದು ಕಾರಣವೆಂದು ವಿಶ್ಲೇಷಿಸಲಾಗಿತ್ತು. ಮತ್ತೆ ಈಗ ಜಾತಿಗಣತಿ ವರದಿ ಬಿಡುಗಡೆಯಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮೇಲೆ ನೇರ ಪರಿಣಾಮ ಬೀರಬಹುದು.

ಹಾಗಾಗಿ ಚುನಾವಣೆ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕುವುದು ಯಾಕೆ. ಇದರಿಂದ ಜೆಡಿಎಸ್ ಗಿಂತಲೂ ಕಾಂಗ್ರೆಸ್‍ಗೆ ಪ್ಲಸ್ ಆಗಲಿದೆ. ಜನಸಂಖ್ಯೆ ಆಧಾರದಲ್ಲಿ ಹಿಂದುಳಿದ ವರ್ಗ ಮೀಸಲಾತಿಗೆ ಒತ್ತಾಯಿಸಬಹುದು ಎಂಬ ಆತಂಕ ಸಿಎಂ ಕುಮಾರಸ್ವಾಮಿ ಅವರಲ್ಲಿ ಕಾಡುತ್ತಿರುವಂತಿದೆ. ಹಾಗಾಗಿಯೇ ಮಾಜಿ ಸಿಎಂ ಎಷ್ಟೇ ಒತ್ತಡ ಹಾಕಿದರೂ ಲೋಕಸಭಾ ಚುನಾವಣೆವರೆಗೂ ವರದಿ ಬಿಡುಗಡೆ ಮಾಡುವುದು ಬೇಡವೆಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin