ಬಾಯಲ್ಲಿ ಸ್ವದೇಶಿ ಭಕ್ತಿ, ಜೀವನವೆಲ್ಲ ವಿದೇಶಿ ಆಸಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Swadeshi-1
ಇಂದು ನಾವು ದೈನಂದಿನ ಕಾರ್ಯ ಪ್ರಾರಂಭಿಸುವ ಹಂತವಾದ ಹಲ್ಲುಜ್ಜುವ ಬ್ರಷ್‍ನಿಂದ ಹಿಡಿದು ವಿನೂತನ ತಂತ್ರಜ್ಞಾನಗಳಾದ ಟಿವಿ, ರೆಫ್ರಿಜರೇಟರ್, ಹವಾ ನಿಯಂತ್ರಕ ಇತ್ಯಾದಿ ವಸ್ತುಗಳನ್ನು ಕೊಂಡುಕೊಳ್ಳಲು ವಿದೇಶಿ ಉತ್ಪನ್ನಗಳ ಮೇಲೆ ಆಕರ್ಷಿತರಾಗುತ್ತಿದ್ದೇವೆ. ನೆನಪಿರಲಿ, ನಾವು ವಿದೇಶದಿಂದ ತಯಾರಾದ ಪ್ರತಿಯೊಂದು ವಸ್ತುಗಳನ್ನು ಕೊಂಡಾಗಲೂ ನಾವು ಬೆವರು ಸುರಿಸಿ ದುಡಿದ ಹಣ ಇತರೆ ದೇಶಗಳ ಬೊಕ್ಕಸಕ್ಕೆ ಸುಲಭವಾಗಿ ಸೇರುತ್ತಿವೆ.

Swadeshi

ಇದರಿಂದಾಗಿ, ಆ ದೇಶಗಳ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ, ವಿದೇಶಿ ವಸ್ತುಗಳನ್ನು ಕೊಂಡುಕೊಂಡು ಸಂಭ್ರಮಿಸುವ ನಾವು ನಮ್ಮ ದೇಶಕ್ಕೆ ಪರೋಕ್ಷವಾಗಿ ಅನ್ಯಾಯ ಮಾಡುತ್ತಿದ್ದೇವೆ ಅಲ್ಲವೆ..? ಹೀಗಾಗಿಯೇ ಇಂದಿಗೂ ನಮ್ಮದು ಬಡರಾಷ್ಟ್ರವಾಗಿರುವುದು.  ಇಂದು ಅನ್ಯ ದೇಶದ ಕಂಪೆನಿಗಳು ನಮ್ಮ ದೇಶದಲ್ಲಿ ಎಷ್ಟರ ಮಟ್ಟಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಿವೆ ಎಂದರೆ ಎಲ್ಲಾ ಮಾರುಕಟ್ಟೆಗಳಲ್ಲಿಯೂ ವಿದೇಶಿ ಉತ್ಪನ್ನಗಳದ್ದೇ ಹವಾ. ಅವರು ನೀಡುವ ಆಕರ್ಷಕ ಜಾಹೀರಾತುಗಳಿಗೆ ಮಾರುಹೋಗಿ ನಮ್ಮತನವನ್ನೇ ನಾವು ಮಾರಿಕೊಳ್ಳುತ್ತಿದ್ದೇವೆ. ಜಾಗ್ರತೆ ಬಂಧುಗಳೇ ಜಾಹೀರಾತಿನಲ್ಲಿ ಕಂಡುಬರುವುದೆಲ್ಲ ನಿಜವಲ್ಲ.

ಎಲ್ಲಿಯಾದರೂ ಹಾರ್ಲಿಕ್ಸ್ ಕುಡಿದು ದಡ್ಡ ಅತೀ ಬುದ್ಧಿವಂತನಾಗಿದ್ದನ್ನು ನೋಡಿರುವಿರಾ? ಲಕ್ಸ್ ಸೋಪನ್ನು ಉಪಯೋಗಿಸಿ ಕಪ್ಪನೆಯ ವ್ಯಕ್ತಿ ಬೆಳ್ಳಗಾಗಿರುವುದನ್ನು ನೋಡಿರುವಿರಾ? ಹೀಗೆ ಇತ್ಯಾದಿ. ಇವೆಲ್ಲ ಸಾಧ್ಯವಿಲ್ಲವೆಂದ ಮೇಲೆ, ಆ ದೇಶದ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬೀಳುವುದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಲ್ಲವೇ ಒಮ್ಮೆ ಯೋಚಿಸಿ.

flag-students

ನಮಗೆ ಅರಿವಿರಲಿ, ನಮ್ಮ ತಾಯ್ನಾಡಿನಲ್ಲಿಯೂ ಕೂಡ ವಿದೇಶ ವಸ್ತುಗಳ ಗುಣಮಟ್ಟಕ್ಕಿಂತ ಹೆಚ್ಚಿನ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವ ಸ್ವದೇಶಿ ಹಾಗೂ ಗುಡಿ ಕೈಗಾರಿಕೆಗಳಿವೆ. ಹೀಗಾದರೂ, ನಮ್ಮವರನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ನಮಗೇಕಿಲ್ಲ? ನಮ್ಮ ತಾಯ್ನಾಡಿನ ಅನ್ನ, ನೀರು, ಉಸಿರಾಡುವ ಗಾಳಿಯ ಋಣ ನಮ್ಮ ಮೇಲಿರುವಾಗ, ನಾವು ಕಷ್ಟಪಟ್ಟು ಸಂಪಾದಿಸಿದ ಹಣ ನಮ್ಮ ಮಾತೃಭೂಮಿಗೆ ಸೇರಿದರೆ ಸದೃಢ ಹಾಗೂ ಸಮರ್ಥ ದೇಶವನ್ನು ಕಟ್ಟಬಹುದು. ಇಡೀ ಜಗತ್ತೇ ನಮ್ಮೆಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಬಹುದು.

ಪ್ರಸ್ತುತ ಭಾರತದ ಎಲೆಕ್ಟ್ರಾನಿಕ್ಸ್ ಹಾಗೆಯೇ ಇತರೇ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರೂ ಬಹುಪಾಲು ಚೀನಾ ವಸ್ತುಗಳದ್ದೇ ಕಾರುಬಾರು. ಒಂದೆಡೆ ನಮ್ಮ ದೇಶದಿಂದ ವ್ಯಾಪಾರ ವಹಿವಾಟಿನ ಮೂಲಕ ಕೋಟಿ ಕೋಟಿ ಹಣವನ್ನು ಬಾಚುತ್ತಿದ್ದರೂ, ಗಡಿಯಲ್ಲಿ ಕಾಲ್ಕೆರೆದು ದಿನನಿತ್ಯ ಸಂಘರ್ಷದ ವಾತಾವರಣ ಸೃಷ್ಟಿಸುತ್ತಿರುವ ಚೀನಾ ದೇಶದಂತಹ ಕಳಪೆ ವಸ್ತುಗಳು ನಮಗೆ ಬೇಕಾ? ಅಂತಹ ನಂಬಿಕೆ ದ್ರೋಹಿ ದೇಶದ ವಸ್ತುಗಳಿಗೆ ನಮ್ಮ ರಾಷ್ಟ್ರ ಪ್ರವೇಶಿಸಲು ಅನುವು ಮಾಡಿಕೊಡಬೇಕೆ ಒಮ್ಮೆ ಯೋಚಿಸಿ?

Swadeshi-2

ಈ ಎಲ್ಲಾ ದುಃಸ್ಥಿತಿಗೆ ಕಾರಣವಾಗಿರುವುದು ಇಂದಿನ ಸಮಾಜದ ಕೆಲವು ಪ್ರಭಾವಿ ವ್ಯಕ್ತಿಗಳು ಹಾಗು ರಾಜಕಾರಣಿಗಳು. ಬಾಂಧವ್ಯದ ನೆಪದಲ್ಲಿ ವಿದೇಶಿ ಉತ್ಪನ್ನಗಳನ್ನು ದೇಶೀಯ ಮಾರುಕಟ್ಟೆಗೆ ತರುವುದರೊಂದಿಗೆ, ಆಮದು ಹಾಗು ಇನ್ನಿತರ ತೆರಿಗೆಗಳನ್ನು ಕಡಿತ ಮಾಡಿ, ನಮ್ಮ ದೇಶದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವುದರಿಂದಲೇ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಭಾರತೀಯರೇ ಏಳಿ ಎದ್ದೇಳಿ, ನಮಗೆ ಮತ್ತೊಮ್ಮೆ ಸ್ವಾತಂತ್ರ್ಯ ಬೇಕು ಎಂಬ ಘೋಷಣೆ ಮೊಳಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಹೌದು ಸ್ನೇಹಿತರೇ, ನಮಗೆ ಇನ್ನೊಮ್ಮೆ ಸ್ವಾತಂತ್ರ್ಯ ಬೇಕಾಗಿರುವುದು ನಮ್ಮನ್ನು ಆಳುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಹಾಗು ದೇಶಿ ಮಾರುಕಟ್ಟೆಯನ್ನು ಬಹುವಾಗಿ ಅತಿಕ್ರಮಿಸಿರುವ ವಿದೇಶಿ ವಸ್ತುಗಳಿಂದ.

ಪ್ರೀತಿ ಪಾತ್ರರೇ, ದೇಶವನ್ನೇ ಕಾಪಾಡಬೇಕೆಂದರೆ ಸದೃಢ ಸ್ಥಿತಿಯಲ್ಲಿ ನೋಡಬೇಕೆಂದರೆ ಕ್ರಾಂತಿಕಾರಕ ಚಳವಳಿಗಳು, ಸತ್ಯಾಗ್ರಹಗಳೇ ಬೇಕೆಂದಿಲ್ಲ. ನಾವು ದೇಶಾಭಿಮಾನದಿಂದ, ಆತ್ಮಾಭಿಮಾನದಿಂದ ಮಾಡುವ ಒಂದು ಸಣ್ಣ ಕೆಲಸ, ತೆಗೆದುಕೊಳ್ಳುವ ಒಂದು ಅತ್ಯಮೂಲ್ಯ ನಿರ್ಧಾರ, ನಮ್ಮ ದೇಶದ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ, ನಾನೊಬ್ಬ ಅಪ್ಪಟ ಭಾರತೀಯನೆಂಬ ಹೆಮ್ಮೆ ತಂದುಕೊಡುತ್ತದೆ. ಇದನ್ನೇ, ನಮ್ಮ ಭಾರತಮಾತೆ ನಮ್ಮಿಂದ ಬಯಸುತ್ತಿರುವುದು. ಹೀಗಾದಾಗಲೇ ದೇಶದ ಪ್ರಗತಿಗೆ ಮಿಂಚಿನಂತಹ ವೇಗ ಬರುವುದು. ಬಾಲಗಂಗಾಧರ್ ತಿಲಕ್‍ರವರು ಬಯಸಿದಂತಹ ಸ್ವದೇಶಿ ಸ್ವಾತಂತ್ರ್ಯವನ್ನು ತಂದುಕೊಡೋಣ.

Facebook Comments

Sri Raghav

Admin