ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆ 8 ದಿನ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Shiradi-Ghat--01
ಹಾಸನ, ಆ.16- ಕಳೆದ ಕೆಲವು ದಿನಗಳಿಂದ ಮಲೆನಾಡಿನ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭೂ ಕುಸಿತ ಉಂಟಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ಸಂಚಾರವನ್ನು ಮತ್ತೆ ಎಂಟು ದಿನ ಬಂದ್ ಮಾಡಲಾಗಿದೆ.
ನಿನ್ನೆ ಶಿರಾಡಿಘಾಟ್‍ನಲ್ಲಿ ಗುಡ್ಡಕುಸಿದ ಪರಿಣಾಮ ಟ್ಯಾಂಕರ್ ಹಾಗೂ ಬಸ್‍ಗಳಿಗೆ ಹಾನಿಯಾಗಿದ್ದು, ಏಕಾಏಕಿ ಭೂ ಕುಸಿತದಿಂದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸಹ ನಡೆದಿದೆ. ಇನ್ನೂ ಆರು ಕಡೆಗಳಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿಘಾಟ್ ರಸ್ತೆ ಬಂದ್ ಮಾಡಲಾಗಿದೆ. ಮುಂದಿನ 10 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಿ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಆದೇಶ ಹೊರಡಿಸಿದ್ದಾರೆ.

ಆ.25ರ ವರೆಗೆ ಲಘು ವಾಹನ ಸೇರಿದಂತೆ ಎಲ್ಲ ವಾಹನಗಳಿಗೆ ನಿಷೇಧ ಹೇರಲಾಗಿದೆ. ಸಿಮೆಂಟ್ ರಸ್ತೆ ಮಾಡುವ ಸಲುವಾಗಿ ಕಳೆದ ಆರು ತಿಂಗಳಿನಿಂದ ಬಂದ್ ಆಗಿದ್ದ ಈ ರಸ್ತೆ ಕಳೆದ 20 ದಿನಗಳ ಹಿಂದಷ್ಟೆ ಪುನರಾರಂಭವಾಗಿತ್ತು. ಆದರೆ ಮಳೆಯಿಂದ ಮತ್ತೆ ಹಾಳಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲು ಮಂಗಳೂರು-ಹಾಸನ ಜಿಲ್ಲಾಡಳಿತ ಮುಂದಾಗಿದ್ದು, ಬಿಸಿಲೆ, ಚಾರ್ಮಾಡಿ ಘಾಟ್, ಮೂಡಿಗೆರೆ, ಹಾನಬಾಳು ಮೂಲಕ ಪರ್ಯಾಯ ವ್ಯವಸ್ಥೇ ಕಲ್ಪಿಸಲು ಮುಂದಾಗಿದೆ.

ಇನ್ನು ಶಿರಾಡಿಘಾಟ್‍ನಲ್ಲಿ ಗುಡ್ಡಕುಸಿತ ಉಂಟಾಗಿ ನಡು ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡುವ ನೆಪದಲ್ಲಿ ಕೆಲವರು ಹಣ ಪಡೆದು ಮೋಸ ಮಾಡಿರುವ ಘಟನೆ ಸಹ ನಡೆದಿದೆ. ಇದರ ಮಧ್ಯೆ ವಯೋವೃದ್ಧರೊಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಕಾಡಿನಿಂದ ರಕ್ಷಣೆ ಮಾಡಿರುವ ಯುವಕರ ವೃಂದ ಪ್ರಶಂಸೆಗೆ ಪಾತ್ರವಾಗಿದೆ.

Facebook Comments

Sri Raghav

Admin