ವಾಜಪೇಯಿ ಆರೋಗ್ಯ ಚಿಂತಾಜನಕ, ಏಮ್ಸ್’ನತ್ತ ರಾಜಕೀಯ ನಾಯಕರ ದಂಡು

ಈ ಸುದ್ದಿಯನ್ನು ಶೇರ್ ಮಾಡಿ

Vajapeyii

ನವದೆಹಲಿ, ಆ.16- ಭಾರತೀಯ ಜನತಾ ಪಕ್ಷದ ಸ್ಥಾಪಕ ಸದಸ್ಯ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ವಾಜಪೇಯಿ ಅವರು ಚಿಕಿತ್ಸೆ ಪಡೆಯುತ್ತಿರುವ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ಇಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.   ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಮಂತ್ರಿಮಂಡಲದ ಸಹೋದ್ಯೋಗಿಗಳು ಸಹ ಆಸ್ಪತ್ರೆಗೆ ಭೇಟಿ ನೀಡಿದರು. 93 ವರ್ಷದ ವಾಜಪೇಯಿ ಅವರನ್ನು ಜೂನ್ 11ರಂದು ಮೂತ್ರಪಿಂಡ, ಮೂತ್ರ ನಾಳ ಮತ್ತು ಹೃದಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರುವ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ, ನಿನ್ನೆಯಿಂದ ವಿಷಮ ಹಂತ ತಲುಪಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಬಿಜೆಪಿ ಧುರೀಣರ ಒಂದು ಮೂತ್ರಪಿಂಡ ಮಾತ್ರ ಕೆಲಸ ಮಾಡುತ್ತಿದೆ. 2009ರಲ್ಲಿ ಅವರು ಪಾಶ್ರ್ವವಾಯು ಪೀಡಿತರಾಗಿದ್ದು, ಅರಿವಿನ ಸಾಮಥ್ರ್ಯ ಕಳೆದುಕೊಂಡಿದ್ದಾರೆ. ಅಲ್ಲದೇ ವಯೋಸಹಜ ಚಿತ್ತವೈಕಲ್ಯಕ್ಕೂ ಒಳಗಾಗಿದ್ದಾರೆ. ಕಳೆದ 24 ತಾಸುಗಳಿಗೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕಳೆದ 30 ವರ್ಷಗಳಿಂದ ಮಾಜಿ ಪ್ರಧಾನಿ ಅವರ ಆರೋಗ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ವೈದ್ಯ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ಧಾರೆ.  ವಾಜಪೇಯಿ ಅವರ ಸ್ಥಿತಿ ಕ್ಷಣ ಕ್ಷಣಕ್ಕೂ ವಿಷಮವಾಗುತ್ತಿದ್ದು, ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ(ಕೃತಕ ಉಸಿರಾಟ) ಇರಿಸಲಾಗಿದೆ ಎಂದು ಆಸ್ಪತ್ರೆಯ ಉನ್ನತ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿದ ವೆಂಕಯ್ಯನಾಯ್ಡು, ಅಮಿತ್ ಷಾ ಮೊದಲಾದ ಗಣ್ಯಾತಿಗಣ್ಯರು ಹಿರಿಯ ವೈದ್ಯಾಧಿಕಾರಿಗಳಿಂದ ಮಾಜಿ ಪ್ರಧಾನಿ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಆರೋಗ್ಯ ವಿಚಾರಿಸಿದರು. ಈಗಾಗಲೇ ಕೇಂದ್ರ ಸಚಿವರು ಹಾಗೂ ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ವಾಜಪೇಯಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಬಿಜೆಪಿ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಜಮಾಯಿಸಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆಸ್ಪತ್ರೆ ಸುತ್ತಮುತ್ತಲಿರುವ ಜನರು ಮತ್ತು ವಾಹನಗಳನ್ನು ಸಿಬ್ಬಂದಿ ತೆರವುಗೊಳಿಸಿದರು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿರುವ ವಾಜಪೇಯಿ ಅವರ ಕುಟುಂಬದ ಸದಸ್ಯರು ತಕ್ಷಣ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.

#ಅಜಾತ ಶತ್ರು, ಅತ್ಯುತ್ತಮ ಸಂಸದೀಯ ಪಟು :
ರಾಷ್ಟ್ರ ರಾಜಕೀಯ ವಲಯದಲ್ಲಿ ಅಪಾರ ಗೌರವ ಸಂಪಾದಿಸಿರುವ ಮಾಜಿ ಪ್ರಧಾನಿ, ಅತ್ಯುತ್ತಮ ಸಂಸದೀಯ ಪಟು ವಾಜಪೇಯಿ ಭಾರತರತ್ನ ಪ್ರಶಸ್ತಿಗೆ ಪಾತ್ರರಾಗಿದ್ದರು. ವಾಜಪೇಯಿ ಅವರು ಅಜಾತಶತ್ರು, ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿ ಬದ್ಧರಾದವರು. ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಭಾರತದ ಪ್ರಧಾನಮಂತ್ರಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು.

ಹಿರಿಯ ಸಂಸದೀಯ ಪಟುವಿನ ರಾಜಕೀಯ ಬದುಕು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ಅವರು ಲೋಕಸಭೆಗೆ ಒಂಭತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ. ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಅವರು ಭಾರತದ ಸ್ವಾತಂತ್ರ್ಯ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

Vajapeyii-01

 

Vajapeyii-02

Facebook Comments

Sri Raghav

Admin