ಪ್ರೇಕ್ಷಕನ ನೋಟದ ಕಡೆಗೆ ‘ಅಯೋಗ್ಯ’ನ ಆಟ..!

ಈ ಸುದ್ದಿಯನ್ನು ಶೇರ್ ಮಾಡಿ

ayogya-kannada-movie
ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಅಯೋಗ್ಯನ ಪ್ರವೇಶವಾಗುತ್ತಿದೆ. ಆರಂಭದಿಂದಲೂ ಬಿಡುಗಡೆವರೆಗೂ ಬಹಳಷ್ಟು ಸುದ್ದಿಯಲ್ಲೇ ಸಿಲುಕಿದಂತಹ ಅಯೋಗ್ಯ ಇದೇ ವಾರ ರಾಜ್ಯಾದ್ಯಂತ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬರುತ್ತಿದ್ದಾನೆ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಆಶ್ಚರ್ಯ ಎಂದರೆ ಈ ಚಿತ್ರವು ರಿಲೀಸ್ ಆಗುವುದಕ್ಕೂ ಮುಂಚೆಯೇ ಚಿತ್ರದ ನಿರ್ಮಾಪಕರು ಹಾಕಿದ ಬಂಡವಾಳದಲ್ಲಿ ಅರ್ಧದಷ್ಟು ಹಣವನ್ನು ಬೇರೆ ಬೇರೆ ಮೂಲಗಳಿಂದ ಮರಳಿಸಿಕೊಡುವ ಮೂಲಕ ಒಂದು ಹಂತದ ಯಶಸ್ಸನ್ನು ತಂದು ಕೊಟ್ಟಿದೆಯಂತೆ.

ಹಾಗೆಯೇ ಸ್ವತಃ ಚಿತ್ರದ ನಿರ್ಮಾಪಕರಾದ ಟಿ.ಆರ್.ಚಂದ್ರಶೇಖರ್ ಮಾತನಾಡುತ್ತ, ಇದೊಂದು ಪಕ್ಕಾ ಗ್ರಾಮೀಣ ಹಿನ್ನಲೆಯಲ್ಲಿ ನಡೆಯುವ ಕಥೆ. ಮಂಡ್ಯಾ ಗ್ರಾಮೀಣ ಪರಿಸರದಲ್ಲಿ ನಡೆಯುವ ನವಿರಾದ ಹಾಸ್ಯವಿದೆ. ಇದರ ಜೊತೆಗೆ ಚಿತ್ರದಲ್ಲಿ ಉತ್ತಮವಾದ ಸಂದೇಶವನ್ನೂ ಹೇಳಲಾಗಿದೆ. ಚಿತ್ರದಲ್ಲಿ ಪ್ರೇಕ್ಷಕರ ಮನರಂಜನೆಗೆ ಏನೇನು ಬೇಕೋ ಅದೆಲ್ಲವೂ ಹದವಾಗಿ ಮೂಡಿ ಬಂದಿದೆ. ನಮ್ಮ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಕಥೆಯ ಬಗ್ಗೆ ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಚಿತ್ರವನ್ನು ವಿಶೇಷವಾಗಿ ಕಾರ್ಪೋರೇಟ್ ಸ್ಟೈಲ್‍ನಲ್ಲಿ ರಾಜ್ಯದ 250ಕ್ಕೂ ಹೆಚ್ಚು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‍ಗಳು ಅಲ್ಲದೆ ದೇಶದ ಪ್ರಮುಖ ಕೇಂದ್ರಗಳು ಹಾಗೂ ವಿದೇಶಗಳಲ್ಲಿ ಕೂಡ ಬಿಡುಗಡೆ ಮಾಡುತ್ತಿದ್ದೇವೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯಿಂದ ಹೊರ ಬರುತ್ತಿರುವ ಎರಡನೆ ಚಿತ್ರ ಇದಾಗಿದೆ. ಅಲ್ಲದೆ ಬೀರ್‍ಬಲ್, ಜಾನ್ ಸೀನಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮುಂತಾದ ಪ್ರಾಜೆಕ್ಟ್‍ಗಳು ನಿರ್ಮಾಣ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ತೆರೆಗೆ ಬರಲಿವೆ ಎಂದು ಹೇಳಿದರು.

Ayogya

ಆರಂಭದಲ್ಲಿ ನನಗೆ ಚಿತ್ರದ ಟೈಟಲ್ ತುಂಬಾ ಇಷ್ಟವಾಗಿತ್ತು. ನಿರ್ದೇಶಕ ಮಹೇಶ್ ಬಂದು ಕಥೆ ಹೇಳುವಾಗ ಮೊದಲು ಕೇರ್‍ಲೆಸ್ ಆಗಿ ಕೇಳುತ್ತಾ ಹೋದೆ. ನಂತರ ಬರುಬರುತ್ತಾ ಸಖತ್ ಎಂಟರ್‍ಟೈನ್ ಆಗಿ ಕಥೆ ನಡೆಯುವುದನ್ನು ನೋಡಿ ಖುಷಿಯಾಯಿತು. ಮೊದಲ ನಿರ್ಮಾಪಕರು ಹಿಂದೆ ಸರಿದು ಸಿನಿಮಾ ನಿಲ್ಲುವಂತಾದಾಗ ಗೆಳೆಯ ಮಹೇಶ್‍ಕುಮಾರ್‍ಗೆ ಒಳ್ಳೇದಾಗುತ್ತೆ ಎಂದು ಧೈರ್ಯ ತುಂಬಿದ್ದೆ. ಅದರಂತೆ ಟಿ.ಆರ್.ಚಂದ್ರಶೇಖರ್ ಅವರು ನಮ್ಮ ಪಾಲಿಗೆ ದೇವರಂತೆ ಬಂದು ಯಾವುದೇ ಕೊರತೆ ಉಂಟುಮಾಡದಂತೆ ಚಿತ್ರವನ್ನು ಮುಗಿಸಿ ರಿಲೀಸ್ ಮಾಡುತ್ತಿದ್ದಾರೆ ಎಂದು ನಾಯಕ ನೀನಾಸಂ ಸತೀಶ್ ಚಿತ್ರ ಆರಂಭದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು.
ಈ ಚಿತ್ರದ ಗ್ಲಾಮರ್ ಅಟ್ರ್ಯಾಕ್ಷನ್ ಎಂದರೆ ನಾಯಕಿ ರಚಿತಾರಾಮ್. ಅವರು ಚಿತ್ರದಲ್ಲಿ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಪಾತ್ರದ ಬಗ್ಗೆ ಮಾತನಾಡಿದ ಅವರು ನಾನು ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್ ಕೂಡ ಮಾಡಿದ್ದೇನೆ ಎಂದು ಹೇಳಿದರು. ನಿರ್ದೇಶಕ ಮಹೇಶ್‍ಕುಮಾರ್ ಮಾತನಾಡುತ್ತ , ನನಗೆ ಚಿತ್ರರಂಗದಲ್ಲಿ ಆಶ್ರಯ, ವಿದ್ಯೆ, ಅನ್ನ ನೀಡಿದ ಯೋಗರಾಜಭಟ್ಟರು, ಸೂರಿ ಅವರ ಆರ್ಶಿವಾದದಿಂದ ಈಗ ನಾನೊಬ್ಬ ನಿರ್ದೇಶಕನಾಗಿ ಗುರುತಿಸಿ ಕೊಂಡಿದ್ದೇನೆ. ಚಿತ್ರದ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನನಗೆ ಕಲಾವಿದರು, ತಂತ್ರಜ್ಞರು ನೀಡಿದ ಪ್ರೋತ್ಸಾಹವನ್ನು ಮರೆಯಲಾರೆ. ನಿರ್ಮಾಪಕರು ನನ್ನ ದಾರಿಗೆ ದೇವರಾಗಿ ಬಂದರು ಎಂದು ಭಾವುಕರಾಗಿ ಹೇಳಿಕೊಂಡರು. ಈ ಚಿತ್ರದ 4 ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದೆ. ಕಲಾವಿದರಾದ ತಬಲನಾಣಿ, ಶಿವರಾಜ.ಕೆ.ಆರ್.ಪೇಟೆ, ಛಾಯಗ್ರಾಹಕ ಪ್ರೀತಮ್ ತೆಗ್ಗಿನಮನೆ, ಸಂಭಾಷಣೆಗಾರ ಶರತ್ ಚಕ್ರವರ್ತಿ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು.

Ayogya-Move-Add

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin