ಅಜಾತಶತ್ರು, ಮಾಜಿ ಪ್ರಧಾನಿ ವಾಜಪೇಯಿ ಇನ್ನಿಲ್ಲ ..!

ಈ ಸುದ್ದಿಯನ್ನು ಶೇರ್ ಮಾಡಿ

Atal-Bihari------01

ನವದೆಹಲಿ,ಆ.16- ದೇಶ ಕಂಡ ಅಪ್ರತಿಮ ಸಂಸದೀಯಪಟು, ಬಿಜೆಪಿ ಪಕ್ಷ ಪ್ರಮುಖ ಸಂಸ್ಥಾಪಕರೊಲ್ಲಬ್ಬರಾಗಿ ಅಜಾತ ಶತ್ರು ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಭಾರತ ರತ್ನ ಪ್ರಶಸ್ತಿ ಪುರಸ್ಕøತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಇಂದು ಚಿಕಿತ್ಸೆ ಫಲಿಸದೆ ಸಂಜೆ 5.05 ಕ್ಕೆ  ಕೊನೆಯುಸಿರೆಳೆದರು. ಈ ಕುರಿತು ಅಧಿಕೃತವಾಗಿ ಏಮ್ಸ್ ನಿಂದ ಮಾಧ್ಯಮ  ಪ್ರಕಟಣೆ  ಹೊರಡಿಸಲಾಗಿದೆ. ಕಳೆದ 36 ಗಂಟೆಗಳಿಂದ ವಾಜಪೇಯಿ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ಜೀವರಕ್ಷಕದಲ್ಲಿಟ್ಟು  ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಯಾವ ಚಿಕಿತ್ಸೆಯೂ ಫಲಿಸಲಿಲ್ಲ.    ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಅವರನ್ನು ಉಳಿಸಿಕೊಳ್ಳಲು ಕೊನೆಯ ಕ್ಷಣದವರೆಗೆ ತಜ್ಞ ವೈದ್ಯರ ತಂಡ ನಡೆಸಿದ ಪ್ರಯತ್ನ ಹಾಗೂ ದೇಶಾದ್ಯಂತ ಮಾಡಿದ ಪೂಜೆ-ಹೋಮ ಹವನಗಳು ಯಾವುದು ಕೈ ಹಿಡಿಯಲಿಲ್ಲ.

Press Release

ಇಂದು ಬೆಳಗ್ಗೆ 9 ಗಂಟೆಗೆ ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಅವರು ಕೊನೆಯುಸಿರೆಳೆದರೆಂದು ವೈದ್ಯರು ತಿಳಿಸಿದ್ದಾರೆ. ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ರಾಷ್ಟ್ರಪತಿ ರಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಲಾಲ್‍ಕೃಷ್ಣ ಅಡ್ವಾನಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್,ಸುಷ್ಮಾ ಸ್ವರಾಜ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Atal-Bihari

ಕಳೆದ ಒಂದು ದಶಕದಿಂದ ವಯೋಸಹಜ ಮತ್ತು ಮರೆಗುಳಿ ರೋಗಕ್ಕೆ ತುತ್ತಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನಾಳೆ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಾಧರಗಳೊಂದಿಗೆ ನಡೆಯಲಿದೆ. ಮೃತರ ಗೌರವಾರ್ಥವಾಗಿ ದೇಶಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳು, ಸಂಸತ್ ಭವನ, ಸುಪ್ರೀಂಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಸೇರಿದಂತೆ ಎಲ್ಲೆಡೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಲಾಗಿದೆ.

ವಾಜಪೇಯಿ ನಿಧನದಿಂದ ರಾಷ್ಟ್ರಾದ್ಯಂತ ಒಂದು ವಾರ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.   ಕಳೆದ ಮೂರು ತಿಂಗಳಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿದ್ದರಿಂದ ನಾನಾ ರೀತಿಯ ಊಹಾಪೋಹಗಳು ಕೇಳಿಬಂದಿದ್ದವು.

ನಿನ್ನೆ ರಾತ್ರಿಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದ್ದರು. 24 ಗಂಟೆಗಳ ಆರೋಗ್ಯ ಸುಧಾರಣೆ ಕುರಿತಂತೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇಂದು ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಜೆ.ಪಿ.ನಡ್ಡಾ, ಮುಕ್ತಾರ್ ಅಬ್ಬಾಸ್ ನಖ್ವಿ, ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ಶಿವರಾಜ್ ಸಿಂಗ್ ಚಹ್ವಾಣ್, ಅರವಿಂದ ಕೇಜ್ರಿವಾಲ್, ದೇವೇಂದ್ರ ಫಡ್ನವೀಸ್, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ರಾಜಕೀಯ ಹಿನ್ನೆಲೆ:
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಅತ್ಯುತ್ತಮ ವಾಕ್‍ಪಟು ಎಂದು ಗುರುತಿಸಿಕೊಂಡಿದ್ದ ವಾಜಪೇಯಿ ಬಿಜೆಪಿಯ ಆಧಾರಸ್ತಂಭ ಎನಿಸಿಕೊಂಡಿದ್ದರು.  ಭಾರತೀಯ ಜನ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದ ಅವರು, ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಲಾಲ್‍ಕೃಷ್ಣ ಅಡ್ವಾಣಿ ಜೊತೆ ಪಕ್ಷವನ್ನು ಸ್ಥಾಪನೆ ಮಾಡಿದ್ದ ವಾಜಪೇಯಿ ದೇಶ ಕಂಡ ಅಪ್ರತಿಮ ಸಂಸದೀಯ ಪಟು.

ಅವರ ವಾಕ್ಚಾತುರ್ಯ, ರಾಜಕೀಯ ಪ್ರೌಢಿಮೆ ಕಂಡ ನೆಹರು ಅವರು ವಾಜಪೇಯಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿದ್ದರು. ಯಾವುದೇ ಪಕ್ಷದಲ್ಲಿದ್ದರೂ ತಮ್ಮ ಎದುರಾಳಿಗಳನ್ನು ಎಂದಿಗೂ ಹದ್ದುಮೀರಿ ಮಾತನಾಡಿದವರಲ್ಲ. ಆದ್ದರಿಂದಲೇ ವಾಜಪೇಯಿ ಅವರನ್ನು ಅಜಾತಶತ್ರು ಎಂದೇ ಚಿರಪರಿಚಿತರಾಗಿದ್ದರು.

ಸಂಸತ್‍ನಲ್ಲಿ ಅವರು ಮಾತನಾಡುವುದಕ್ಕೆ ನಿಂತರೆ ಇಡೀ ಸದನದಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ ಆವರಿಸಿರುತ್ತಿತ್ತು. ಅವರ ಮಾತನ್ನು ಎಲ್ಲರೂ ಗಂಭೀರವಾಗಿ ಆಲಿಸುತ್ತಿದ್ದರು. ರಾಜಸ್ಥಾನದ ಪೋಕ್ರಾನ್‍ನಲ್ಲಿ ನಾಗರಿಕ ಪರಮಾಣು ಪರೀಕ್ಷೆ, ಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ಧ ಗೆದ್ದಿದ್ದು ಅವರ ಹಿರಿಮೆಗಳಲ್ಲೊಂದು. ಭಾರತದ ಅತ್ಯಂತ ದೀರ್ಘ ಕಾಲದ ರಾಜಕೀಯ ಮುತ್ಸದ್ದಿ ಎಂದೇ ಗುರುತಿಸಿಕೊಂಡಿದ್ದ ವಾಜಪೇಯಿ ಇನ್ನು ನೆನಪು ಮಾತ್ರ.

Facebook Comments

Sri Raghav

Admin