ಕರಾವಳಿ-ಮಲೆನಾಡಿನಲ್ಲಿ ಇನ್ನೂ 2 ದಿನ ಸುರಿಯಲಿದೆ ಭಾರಿ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

Accuweather
ಬೆಂಗಳೂರು, ಆ.16-ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶವೂ ಹೆಚ್ಚಾಗಿದ್ದು, ಕೆಲವೆಡೆ ಭೂಕುಸಿತ ಉಂಟಾಗುತ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹವಾ ಮುನ್ಸೂಚನೆ ಪ್ರಕಾರ ಶನಿವಾರದವರೆಗೂ ಪಶ್ಚಿಮಘಟ್ಟ ಪ್ರದೇಶ, ಕೊಡಗು, ಕರಾವಳಿ ಭಾಗದಲ್ಲಿ ಮಿಂಚಿನ ಮಳೆ ಮುಂದುವರೆಯಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೀದರ್-ಕಲಬುರಗಿ ಭಾಗದಲ್ಲಿ ಕೆಲವೆಡೆ ಭಾರೀ ಮಳೆಯಾಗಿದೆ. ಆ ಭಾಗದಲ್ಲಿ ಇಂದೂ ಕೂಡ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ.

ನಾಳೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖವಾಗುವ ಸಾಧ್ಯತೆ ಇದೆ. ಆದರೆ ರಾಜ್ಯದ ಒಳನಾಡಿನಲ್ಲಿ ಭಾರೀ ಮಳೆಯಾಗುವ ಯಾವುದೇ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ಕೆಲವೆಡೆ ಮಾತ್ರ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಬಹಳಷ್ಟು ಕಡೆ ಮಳೆ ಕೊರತೆ ಕಂಡು ಬರುತ್ತಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin