ಮಹದಾಯಿ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Mahadayi
ಬೆಂಗಳೂರು,ಆ.16-ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಮುಂದಾಗಿದೆ. ನ್ಯಾಯಮಂಡಳಿಯು ರಾಜ್ಯದ ಮನವಿಯಂತೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡದ ಸಂಬಂಧ ನ್ಯಾಯಮಂಡಳಿ ಇಲ್ಲವೆ ಸುಪ್ರೀಂ ಕೋರ್ಟ್‍ಗೆ ಸದ್ಯದಲ್ಲೇ ಮೇಲ್ಮನವಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಪರ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಪಾಲಿ ಎಸ್.ನಾರಿಮನ್, ಮೋಹನ್ ಕಾತರಕಿ ಅವರ ಸಲಹೆಯಂತೆಯೇ ರಾಜ್ಯ ಸರ್ಕಾರ ನ್ಯಾಯ ಮಂಡಳಿಯ ತೀರ್ಪನ್ನು ಪ್ರಶ್ನಿಸಲು ತೀರ್ಮಾನಿಸಿದೆ. ಈ ಹಿಂದೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳಕ್ಕೆ ಹಂಚಿಕೆ ಮಾಡಿದ್ದ ನೀರಿನ ಪ್ರಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.

ಸುದೀರ್ಘ ವಿಚಾರಣೆ ನಡೆದ ನಂತರ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗಿತ್ತು. ಕುಡಿಯುವ ನೀರು, ಬೆಂಗಳೂರಿಗೆ ಹೆಚ್ಚುವರಿ ನೀರು ಬಳಕೆ ಸೇರಿದಂತೆ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ತೃಪ್ತಿಕರವಾದ ನ್ಯಾಯ ಸಿಕ್ಕಿತ್ತು.

ಈಗ ಇದನ್ನು ಅಸ್ತ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರ ವಕೀಲರ ಸಲಹೆಯಂತೆ ನ್ಯಾಯಮಂಡಳಿ ಇಲ್ಲವೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹಾಕಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಪಾಲಿ ನಾರಿಮನ್, ಮೋಹನ್ ಕಾತರಕಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ನೀರಾವರಿ ಹಾಗೂ ಕಾನೂನು ತಜ್ಞರು ಸೇರಿದಂತೆ ಮತ್ತಿತರರೊಂದಿಗೆ ಮಾತುಕತೆ ನಡೆಸಿದ್ದಾರೆ.

ಮೇಲ್ಮನವಿ ಸಲ್ಲಿಸುವುದರಿಂದ ಕರ್ನಾಟಕಕ್ಕೆ ಹಿನ್ನಡೆಯಾಗುವುದಿಲ್ಲ. ನ್ಯಾಯಮಂಡಳಿ ಇಲ್ಲವೇ ಸುಪ್ರೀಂಕೋರ್ಟ್‍ನಲ್ಲಿ ಸಮರ್ಥ ವಾದ ಮಂಡಿಸಿದರೆ ಹೆಚ್ಚಿನ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಸಿಗಬಹುದು. ಮೇಲ್ಮನವಿ ಸಲ್ಲಿಸುವುದು ಎಲ್ಲ ರೀತಿಯಿಂದಲೂ ಉತ್ತಮ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಸರ್ವಪಕ್ಷ ಸಭೆ:
ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದ್ಯದಲ್ಲೇ ಸರ್ವಪಕ್ಷ ಸಭೆ ಕರೆಯಲು ತೀರ್ಮಾನಿಸಿದ್ದಾರೆ. ರೈತ ಮುಖಂಡರು, ಕಾನೂನು ತಜ್ಞರು, ಜಲ ತಜ್ಞರು, ಸಂಸದರು, ಕೇಂದ್ರ ಸಚಿವರು ಸೇರಿದಂತೆ ಮತ್ತಿತರ ಮುಖಂಡರ ಸಭೆ ಕರೆದು ಅಂತಿಮವಾಗಿ ಸಭೆಯಲ್ಲಿ ವ್ಯಕ್ತವಾಗು ಅಭಿಪ್ರಾಯವನ್ನು ಕ್ರೋಢೀಕರಿಸಿ ಸರ್ಕಾರ ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಬೇಡಿಕೆ ಏನು:
ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ. ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ತನ್ನ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಹೆಚ್ಚುವರಿಯಾಗಿ ಹುಬ್ಬಳ್ಳಿ ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕು. ಮಹದಾಯಿಯ ನೀರು ಹು-ಧಾ ಕ್ಕೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು.
ಗೋವಾ ಸರ್ಕಾರ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ. ಆದರೆ 173 ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ. ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ.

ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ. ಆದರೆ ಮತ್ತೊಂದು ರಾಜ್ಯವು ಯೋಜನೆಯಿಂದ ತನಗೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು ಎಂದು ವಾದ ಮಂಡಿಸಿತ್ತು. ಕಳೆದ ಎರಡು ದಿನಗಳ ಹಿಂದೆ ನ್ಯಾಯಮೂರ್ತಿ ಪಾಂಚಾಲ್ ನೇತೃತ್ವದ ಮಹದಾಯಿ ನ್ಯಾಯಮಂಡಳಿ ನೇತೃತ್ವದ ಪೀಠ ಕರ್ನಾಟಕದ ಪಾಲಿಗೆ 13.5 ಟಿಎಂಸಿ ನೀರನ್ನು ನಿಗದಿಪಡಿಸಿತ್ತು. ಇದರಲ್ಲಿ ಮಹದಾಯಿಯಿಂದ ಮಲಪ್ರಭಾಕ್ಕೆ 4 ಟಿಎಂಸಿ, ಕುಡಿಯುವ ನೀರು ಬಳಕೆಗಾಗಿ 4 ಟಿಎಂಸಿ, ಬಂಡೂರ ಯೋಜನೆಗೆ 2.18 ಟಿಎಂಸಿ, ಕಳಸಾ ಯೋಜನೆಗೆ 1.72 ಟಿಎಂಸಿ , ಜಲವಿದ್ಯುತ್ ಯೋಜನೆಗೆ 8.2 ಟಿಎಂಸಿ ನೀರನ್ನು ನಿಗದಿಪಡಿಸಿತ್ತು. ನ್ಯಾಯಮಂಡಳಿಯ ಈ ತೀರ್ಪಿಗೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.

Facebook Comments

Sri Raghav

Admin