ನೀವು ಎಷ್ಟು ಗಂಟೆ ನಿದ್ದೆ ಮಾಡುತ್ತೀರಿ ಎಂಬುದೇ ನಿಮ್ಮ ಸಾವನ್ನು ನಿರ್ಧರಿಸುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Sleep-02

ಇಂದು ದಿನಗಳ ಲೆಕ್ಕಕ್ಕಿಂತ ಗಂಟೆಗಳ ಲೆಕ್ಕದಲ್ಲಿ ಕೆಲಸಮಾಡಿ ಸಂಪಾದಿಸಿ ಸಂಸಾರ ನಡೆಸುವ ಕಾಲ. ಈ ಜಂಜಾಟದ ಬದುಕಿನಲ್ಲಿ ಸಂಪಾದನೆಯ ಹಿಂದೆ ಬಿದ್ದು, ನಿದ್ದೆಗೆಟ್ಟು ಸಂಪಾದಿಸಿ, ನಿದ್ದೆಯಿಲ್ಲದೇ ಬರುವ ನಾನಾ ರೋಗಗಳಿಗೆ ಗಳಿಸಿದ್ದನ್ನೆಲ್ಲವನ್ನೂ ವ್ಯಯಿಸುತ್ತಿದ್ದೇವೆ. ಪ್ರತಿ ಜೀವಿಗೂ ನಿದ್ದೆ ಅತಿ ಅನಿವಾರ್ಯ. ನಿದ್ದೆ ದೇಹಕ್ಕೆ ಚೈತನ್ಯ ತುಂಬುತ್ತದೆ, ರೋಗನಿರೊಧಕ ಶಕ್ತಿ ವೃದ್ಧಿಸುತ್ತದೆ. ದೇಹವೆಂಬ ಕಾರ್ಖಾನೆಗೆ ವಿಶ್ರಾಂತಿ ನೀಡಿ ಸದಾಕಾಲ ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ನಿದ್ದೆ ದೇಹಕ್ಕೆ ಒಂದು ಸ್ವಾಭಾವಿಕ ಔಷಧ.

ಚಿಂತೆಯಿರಲಿ, ಇಲ್ಲದಿರಲಿ ನಿದ್ದೆ ಮಾಡಿದರೆ ಆರೋಗ್ಯ ಸುಧಾರಿಸುವುದು. ಸರಿಯಾದ ನಿದ್ದೆ ಇಲ್ಲದವರು ಹಲವು ಬಗೆಯ ರೋಗಗಳಿಂದ ನರಳುವರು. ನಿದ್ದೆ ಎಂತಹ ಚಮತ್ಕಾರಿ ಸೌಂದರ್ಯ ಪ್ರಸಾಧನವೆಂದರೆ ನೀವು ಅದಕ್ಕಾಗಿ ಒಂದು ಪೈಸೆ ಖರ್ಚು ಮಾಡಬೇಕಾಗಿಲ್ಲ. ಪರಿಪೂರ್ಣ ನಿದ್ದೆ ತ್ವಚೆಯನ್ನು ಸ್ನಿಗ್ಧ ಹಾಗೂ ಕಾಂತಿಮಯಗೊಳಿಸುತ್ತದೆ. ಸಮರ್ಪಕ ನಿದ್ದೆ ದೊರೆಯದೇ ಇದ್ದರೆ ಮಾನಸಿಕ ಒತ್ತಡ ಉಂಟಾಗಿ ರಕ್ತನಾಳಗಳು ಶಿಥಿಲಗೊಳ್ಳುತ್ತವೆ. ನಿದ್ರಾಹೀನತೆ ಯಿಂದ ಮುಖ ಚಹರೆ ಒಣಗಿದಂತೆ, ರಸಹೀನವಾಗಿ ಕಾಣುತ್ತದೆ. ನಿದ್ದೆ ಕಡಿಮೆಯಾದರೆ ಮುಖದ ಮೇಲೆ ಸುಕ್ಕು ಕಾಣಿಸಿಕೊಳ್ಳುತ್ತದೆ. ಅಧಿಕವಾಗಿ ನಿದ್ದೆ ಮಾಡಿದರೆ ಕುಂಭಕರ್ಣನ ವಂಶದವರೆಂದು ಗೇಲಿ ಮಾಡುತ್ತಾರೆ. ಆದರೆ ನಿದ್ದೆಯೇ ಬಾರದಿದ್ದರೆ?

ಸುಖ ನಿದ್ದೆ ಮಾನವನ ಬದುಕಿಗೆ ವರದಾನ. ನಿದ್ದೆ ಬಾರದಿದ್ದರೆ ದೇಹದ ತೂಕ ಹೆಚ್ಚುತ್ತದೆ. ನೀವು ಪರಿಪೂರ್ಣ ನಿದ್ದೆಯ ಆನಂದ ಅನುಭವಿಸಿರುವಿರಾದರೆ ಮುಂಜಾನೆ ಏಳಲು ನಿಮಗೆ ಯಾರ ಅಗತ್ಯವಿರುವುದಿಲ್ಲ. ಪರಿಪೂರ್ಣ ನಿದ್ದೆಯಿಂದ ಮನಸ್ಸು ಪ್ರಸನ್ನವಾಗಿರುತ್ತದೆ. ಈ ಪ್ರಸನ್ನತೆಯೇ ಸೌಂದರ್ಯ ವೃದ್ಧಿಗೆ ಕಾರಣವಾಗುತ್ತದೆ.

ಪ್ರತಿ ರಾತ್ರಿ 7 ಗಂಟೆ ನಿದ್ರೆ ಮಾಡುವವರು ಕಡಿಮೆ ಪ್ರಮಾಣದ ಸಾವಿನ ಸಂಭವ ಹೊಂದಿರುತ್ತಾರೆ. ಅಲ್ಲದೇ 6 ಗಂಟೆಗಳಿಗಿಂತ ಕಡಿಮೆ ಅಥವಾ 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವವರಲ್ಲಿ ಸಾವಿನ ಸಂಭವ ಹೆಚ್ಚಿರುತ್ತದೆ ಎಂದು 1.1 ದಶಲಕ್ಷ ಜನರ ಮೇಲೆ ಅಮೇರಿಕನ್ ಕ್ಯಾನ್ಸರ್ ಸೊಸೈಟಿ ನಡೆಸಿದ ಸಮೀಕ್ಷೆಯೊಂದು ಕಂಡುಹಿಡಿದಿದೆ. ಪ್ರತಿ ರಾತ್ರಿ 8.5 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ನಿದ್ರಿಸುವುದು ಸಾವಿನ ಸಂಭವವನ್ನು 15%ನಷ್ಟು ಹೆಚ್ಚಿಸುತ್ತದೆ. ತೀವ್ರ ನಿದ್ರಾಹೀನತೆಯೂ ಮಹಿಳೆಯರು 3.5 ಗಂಟೆಗಳಿಗಿಂತ ಮತ್ತು ಪುರುಷರು 4.5 ಗಂಟೆಗಳಿಗಿಂತ ಕಡಿಮೆ ಸಮಯ ನಿದ್ರಿಸುವುದು ಸಹ ಸಾವಿನ ಸಂಭವವನ್ನು 15%ನಷ್ಟು ಹೆಚ್ಚಿಸುತ್ತದೆ. ನಿದ್ರಾವಧಿಗೆ ತಡೆ ಉಂಟಾದ ಮತ್ತು ನಿದ್ರಾಹೀನತೆಯಿಂದಾಗಿ ನಿದ್ರಿಸುವುದಕ್ಕಾಗಿ ನಿದ್ದೆ ಮಾತ್ರೆಗಳನ್ನು ಬಳಸಿದರೆ ಸಾವಿನ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತದೆ ಎಂಬುದು ತಿಳಿದುಬಂದಿದೆ.

ಪ್ರತಿ ರಾತ್ರಿ ಆರುವರೆಯಿಂದ ಏಳುವರೆ ಗಂಟೆಗಳಷ್ಟು ಕಾಲ ನಿದ್ದೆ ಮಾಡುವವರಲ್ಲಿ ಸಾವಿನ ಸಂಭವ ಅತಿ ಕಡಿಮೆಯಾಗಿರುತ್ತದೆ. ಒಂದು ರಾತ್ರಿಗೆ ಕೇವಲ 4.5 ಗಂಟೆಗಳಷ್ಟು ನಿದ್ರಿಸುವವರಲ್ಲೂ ಸಾವಿನ ಸಂಭವ ಸ್ವಲ್ಪ ಮಟ್ಟಿಗೆ ಹೆಚ್ಚಿರುತ್ತದೆ. ಆದ್ದರಿಂದ ದೇಹಕ್ಕೆ ಅನಿವಾರ್ಯವಿರುವಷ್ಟು ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ನಿದ್ರಾಹೀನತೆ ನಿರ್ಲಕ್ಷಿಸದಿರಿ..!

Sleep-1

ತುಂಬಾ ನಿದ್ದೆ ಬರ್ತಾ ಇರುತ್ತದೆ, ಆದರೆ ಹೋಗಿ ಮಲಗಿದರೆ ನಿದ್ದೇನೆ ಬರುವುದಿಲ್ಲ, ಕೆಲವರು ರಾತ್ರಿ ಇಡೀ ನಿದ್ದೆ ಬರದೆ ಒದ್ದಾಡಿ, ನಂತರ ಮುಂಜಾನೆ ಸ್ವಲ್ಪ ಹೊತ್ತು ನಿದ್ದೆ ಹೋಗುತ್ತಾರೆ. ಈ ರೀತಿಯ ಸಮಸ್ಯೆಯನ್ನು ಹೆಚ್ಚಿನವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ನಿರ್ಲಕ್ಷ್ಯ ಮಾಡುವಂತಹ ವಿಷಯವಲ್ಲ, ನಿದ್ರಾಹೀನತೆ ಅನೇಕ ಭಯಾನಕ ಕಾಯಿಲೆಗಳನ್ನು ತರುತ್ತದೆ. ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ನಿದ್ದೆ ಸರಿಯಾಗಿ ಮಾಡದಿದ್ದರೆ ಖಿನ್ನತೆ ಸಮಸ್ಯೆ ಕಾಡಲಾರಂಭಿಸುತ್ತದೆ. ಈ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸಲು ಮಾತ್ರೆ ತೆಗೆದುಕೊಳ್ಳುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

Facebook Comments

Sri Raghav

Admin