ತುಮಕೂರು ಪೊಲೀಸರಿಂದ ‘ಬೈಸಿಕಲ್ ಬೀಟ್’ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Cycle-beat-tumakur-police
ತುಮಕೂರು, ಆ.17-ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮತ್ತೊಂದು ಹೆಜ್ಜೆಯಿಡುತ್ತಾ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಆರಂಭಿಸಲಾಗಿರುವ ಬೈಸಿಕಲ್ ಬೀಟ್ ವ್ಯವಸ್ಥೆಗೆ ಜಿಲ್ಲಾ ಎಸ್‍ಪಿ ದಿವ್ಯಾಗೋಪಿನಾಥ್ ಚಾಲನೆ ನೀಡಿದರು. ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಜಯನಗರ ಮತ್ತು ತಿಲಕ್‍ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಬಡಾವಣೆಗಳಲ್ಲಿ ಹಗಲು ಹೊತ್ತಿನಲ್ಲಿ ಪೊಲೀಸರು ಬೈಸಿಕಲ್ ಏರಿ ಗಸ್ತು ತಿರುಗುತ್ತಾ ನಾಗರಿಕರಿಗೆ ನಿಮ್ಮ ನೆರವಿಗೆ ನಾವಿದ್ದೇವೆ ಎಂಬ ಸಂದೇಶ ನೀಡಲಿದ್ದಾರೆ.

ಹಗಲಿನಲ್ಲಿ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಾಯುವಿಹಾರಕ್ಕೆ ತೆರಳುವ ಸ್ಥಳಗಳು, ಮಾರುಕಟ್ಟೆ ಪ್ರದೇಶಗಳು, ದೇವಸ್ಥಾನಗಳು, ಶಾಲಾ-ಕಾಲೇಜುಗಳ ಬಳಿ ಬೈಸಿಕಲ್ ಬೀಟ್ ವ್ಯವಸ್ಥೆಯಿಂದಾಗಿ ಪೊಲೀಸರು ನಾಗರಿಕರೊಂದಿಗೆ ಬೆರೆಯುವ ಅವಕಾಶ ದೊರೆಯಲಿದೆ. ಅಕ್ರಮ ಚಟುವಟಿಕೆಗಳು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಲು, ದಾಳಿ ಸಂಘಟಿಸಲು ಸಾಧ್ಯವಾಗಲಿದೆ. ಪೊಲೀಸರ ಇರುವಿಕೆ ಜನರ ಅರಿವಿಗೆ ಬರಲಿದೆ ಹಾಗೂ ಪೊಲೀಸರ ದೈಹಿಕ ಸಾಮಥ್ರ್ಯ ಕೂಡ ಹೆಚ್ಚಲಿದೆ.

1896ರಲ್ಲಿ ಕೆಂಟ್ ರಾಜ್ಯದಲ್ಲಿ ಬೈಸಿಕಲ್‍ನ್ನು ಪೊಲೀಸ್ ಇಲಾಖೆಗೆ ಬಳಸಿಕೊಳ್ಳಲಾಗಿದ್ದು, ಅದೇ ರಾಜ್ಯದಲ್ಲಿ 1904ರ ವೇಳೆಗೆ 124 ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಜಾರಿಗೊಳಿಸಲಾಯಿತು.  ಬ್ರಿಟಿಷ್ ಆಡಳಿತದ ಭಾರತದಲ್ಲೂ ಬೈಸಿಕಲ್ ಪೊಲೀಸಿಂಗ್ ಜಾರಿಯಲ್ಲಿತ್ತು. ಇದರ ಮುಖ್ಯ ಉದ್ದೇಶ ನಗರ ಠಾಣೆಗಳ ಸೀಮಿತ ವ್ಯಾಪ್ತಿಯಲ್ಲಿ ನಡಿಗೆ ಬೀಟ್‍ನ್ನು ಬದಲಾಯಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

ಹಾಗೆಯೇ ಇಕ್ಕಟ್ಟಾದ ಜನಜಂಗುಳಿ ಹೆಚ್ಚಾಗಿರುವ ಕಡೆ ಇದು ಪರಿಣಾಮಕಾರಿ. ಅಪರಾಧ ಮಾಡುವ ವ್ಯಕ್ತಿಗೆ ತನ್ನನ್ನು ಬೈಸಿಕಲ್‍ನಲ್ಲಿ ಸಮೀಪಿಸುತ್ತಿರುವ ವ್ಯಕ್ತಿ ಪೊಲೀಸ್ ಎನ್ನುವುದು ಗಮನಕ್ಕೆ ಬರುವಷ್ಟರಲ್ಲಿ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ. ಶಿರಾದ ಡಿವೈಎಸ್ಪಿ ವೆಂಕಟನಾಯ್ಡು, ಜಿಲ್ಲಾ ಅಪರಾಧ ದಳದ ಎಸ್‍ಐ ರಾಘವೇಂದ್ರ, ರಾಧಾಕೃಷ್ಣ, ಚಂದ್ರಶೇಖರ್, ಲಕ್ಷ್ಮಯ್ಯ, ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin