ಬೆಳಗಾವಿಯ ಸಜ್ಜಿರೊಟ್ಟಿ, ಗುರೆಳ್ಳು ಚಟ್ನಿಗೆ ಮನಸೋತಿದ್ದ ವಾಜಪೇಯಿ..!

ಈ ಸುದ್ದಿಯನ್ನು ಶೇರ್ ಮಾಡಿ

vajapeyi

ಬೆಳಗಾವಿ, ಆ.17- ರಾಷ್ಟ್ರ ರಾಜಕಾರಣದ ಅಜಾತ ಶತ್ರು ಎಂದೇ ಬಣ್ಣನೆಗೆ ಒಳಗಾಗುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬೆಳಗಾವಿ ಅತಿ ಇಷ್ಟದ ಊರು. ಇಲ್ಲಿನ ಖಾದ್ಯಗಳೆಂದರೆ ಅಚ್ಚುಮೆಚ್ಚು. ಕೇವಲ ಎರಡು ಸಲ ಮಾತ್ರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ್ದ ವಾಜಪೇಯಿ ಇಲ್ಲಿನ ಸಜ್ಜಿ ರೊಟ್ಟಿ, ಗಟ್ಟಿ ಮೊಸರು, ಗುರೆಳ್ಳು ಚಟ್ನಿ ಹಾಗೂ ಎಣ್ಣೆಗಾಯಿ ಪಲ್ಯ ಚಪ್ಪರಿಸಿ ಸಂತೃಪ್ತರಾಗಿದ್ದರು.

ಉತ್ತರ ಕರ್ನಾಟಕ ಭಾಗದ ಸಂಸದರ ಎದುರು ಬೆಳಗಾವಿಯ ಸಜ್ಜಿರೊಟ್ಟಿ, ಗುರೆಳ್ಳು ಚಟ್ನಿಯನ್ನು ದೆಹಲಿಯಲ್ಲಿ ಹಲವು ಸಲ ನೆನಪಿಸಿಕೊಳ್ಳುತ್ತಿದ್ದರಂತೆ.  ದೇಶದಲ್ಲಿ ಕಾಂಗ್ರೆಸೇತರ ಪಕ್ಷವಾಗಿ ಉದಯಿಸಿದ್ದ ಜನಸಂಘ 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿತು. ಬಿಜೆಪಿ ಉದಯಿಸಿದಾಗ ಅದರ ಸಾರಥ್ಯ ವಹಿಸಿದ್ದ ವಾಜಪೇಯಿ 1980ರಲ್ಲಿ ಪಕ್ಷಸಂಘಟನೆಗಾಗಿ ಬೆಳಗಾವಿಗೆ ಆಗಮಿಸಿದ್ದರು.  ಬೆಳಗಾವಿಯ ಕೆಎಲïಇ ಸಂಸ್ಥೆಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಿದ್ದ ವಾಜಪೇಯಿ ಅವರು, ಇಂದಿರಾ ಗಾಂಧಿ ಅವರ ದುರಾಡಳಿತ, ತುರ್ತುಪರಿಸ್ಥಿತಿ, ದೇಶದಲ್ಲಿ ಬೆಲೆ ಏರಿಕೆ, ರಾಜ್ಯದ ಗುಂಡೂರಾವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿರುವ ಜನವಿರೋಧಿ ಸರ್ಕಾರಗಳನ್ನು ಬದಲಿಸಿ ಎಂದು ಬೆಳಗಾವಿಗರಿಗೆ ವಾಜಪೇಯಿ ತಮ್ಮ ಭಾಷಣದಲ್ಲಿ ಕರೆ ನೀಡಿದ್ದರು.

ಮೊದಲ ಚುನಾವಣೆಯಲ್ಲೇ ಅಖಾಡಕ್ಕೆ!
ಬಿಜೆಪಿ ಉದಯಿಸಿದ ಬಳಿಕ 1982 ಡಿಸೆಂಬರ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿತ್ತು. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದಲೇ ಬಿಜೆಪಿ ಖಾತೆ ತೆರೆಯಬೇಕು ಎಂಬ ಸದಾಶಯ ಹೊಂದಿದ್ದ ವಾಜಪೇಯಿ ಅವರು, ಕರ್ನಾಟಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಓಡಾಡಿದ್ದರು.
ಬಿಜೆಪಿ ಉದಯಿಸಿದ ಮೊದಲ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 8 ಜನ ಅಭ್ಯರ್ಥಿಗಳು ಬಿಜೆಪಿಯಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದರು. 1982ರ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿ ಚಂದರಗಿ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದ ವಾಜಪೇಯಿ ಅವರು ಸಜ್ಜಿರೊಟ್ಟಿ, ಗಟ್ಟಿ ಮೊಸರು, ಗುರೇಳ್ಳ ಚಟ್ನಿ ಎಣ್ಣೆಗಾಯಿ ಪಳ್ಯೆ ಚಪ್ಪರಿಸಿ, ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ವಿಪರ್ಯಾಸ ಅಂದರೆ 1982ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯಲಿಲ್ಲ. ಮಾರುತಿ ಚಂದರಗಿ ಅವರೇ ಹೆಚ್ಚಿನ ಮತ ಪಡೆದ ಬಿಜೆಪಿ ಅಭ್ಯರ್ಥಿಯಾಗಿದ್ದರು. ವಾಜಪೇಯಿ ಅವರು ಪ್ರಧಾನಿ ಆದ ಬಳಿಕ ಜಿಲ್ಲೆ ಸಂಪರ್ಕಿಸುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಈ ಭಾಗದ ಜನರ ಮನಸಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ.  ಗ್ರಾಮೀಣ ಸಡಕ್ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಕಾಯಕಲ್ಪಕ್ಕೆ ಆದ್ಯತೆ ನೀಡಿದ್ದರು. ಬೆಳಗಾವಿ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಇಂದಿಗೂ ಪ್ರಾಬಲ್ಯ ಹೊಂದಿರುವುದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಠಿಯ ಯೋಜನೆಗಳೇ ಕಾರಣ ಎನ್ನುತ್ತಾರೆ ಈ ಭಾಗದ ರಾಜಕೀಯ ವಿಶ್ಲೇಷಕರು.

Facebook Comments

Sri Raghav

Admin