ವಾಜಪೇಯಿ ಅಂತಿಮ ದರ್ಶನಕ್ಕಾಗಮಿಸಿದ ವಿದೇಶಿ ಗಣ್ಯರು

ಈ ಸುದ್ದಿಯನ್ನು ಶೇರ್ ಮಾಡಿ

Vajpayee--01

ನವದೆಹಲಿ,ಆ.17- ನಿನ್ನೆ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ವಿದೇಶಗಳಿಂದ ಗಣ್ಯರೇ ದಂಡೇ ಆಗಮಿಸಿದೆ. ವಿಶೇಷವಾಗಿ ಅಮೆರಿಕ, ಇಂಗ್ಲೆಂಡ್, ರಷ್ಯಾ ಹಾಗೂ ಸಾರ್ಕ್ ರಾಷ್ಟ್ರಗಳಾದ ಭೂತಾನ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಅನೇಕ ರಾಷ್ಟ್ರಗಳ ಪ್ರಮುಖರು ದೆಹಲಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.  ಅಮೆರಿಕ, ಇಂಗ್ಲೆಂಡ್‍ನಿಂದ ರಾಯಭಾರಿಗಳು ಆಗಮಿಸಿದ್ದರೆ, ರಷ್ಯಾದಿಂದ ಅಲ್ಲಿನ ಪ್ರಮುಖರೊಬ್ಬರು ಆಗಮಿಸಿ ಅಗಲಿದ ಮಹಾನ್ ಚೇತನರ ದರ್ಶನ ಪಡೆದರು.

ಇನ್ನು ಭೂತಾನ್‍ನಿಂದ ಅಲ್ಲಿನ ದೊರೆ ಆಗಮಿಸಿದರೆ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಹೈ ಕಮೀಷನರ್‍ಗಳು ಆಗಮಿಸಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಾರ್ಕ್ ರಾಷ್ಟ್ರ ಸೇರಿದಂತೆ ನೆರೆಹೊರೆಯ ದೇಶಗಳೊಂದಿಗೆ ಹೊಂದಿದ್ದ ಸಂಬಂಧ, ವಿದೇಶಾಂಗ ನೀತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಭಾರತ ಒಬ್ಬ ಹೆಮ್ಮೆಯ ಪುತ್ರನನ್ನು ಕಳೆದುಕೊಂಡು ಬಡವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಂಬನಿ ಮಿಡಿದಿದ್ದಾರೆ. ವಾಜಪೇಯಿ ನಿಧನ ಕೇವಲ ಭಾರತಕ್ಕಲ್ಲದೆ ವಿಶ್ವಕ್ಕೆ ತುಂಬಲಾರದ ನಷ್ಟ ಎಂದು ಅಮೆರಿಕ ಮತ್ತು ಇಂಗ್ಲೆಂಡ್‍ನ ಪ್ರಮುಖರು ಬಣ್ಣಿಸಿದ್ದಾರೆ. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಭಾರತ ವಿಶ್ವದ ಭೂಪಟದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಬೇಕೆಂಬುದು ಅವರ ಆಶಯವಾಗಿತ್ತು. ವಿಶೇಷವಾಗಿ ನಾಗರಿಕ ಪರಮಾಣು ಪರೀಕ್ಷೆ, ಚತುಷ್ಪಥ ಯೋಜನೆ, ಪಾಕ್‍ನೊಂದಿಗೆ ಶಾಂತಿ ಕಾಪಾಡಲು ಲಾಹೋರ್‍ಗೆ ಬಸ್‍ನಲ್ಲಿ ತೆರಳಿದ್ದು ಅವರ ದೂರದೃಷ್ಟಿಯ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

Facebook Comments

Sri Raghav

Admin