ಕಪಿಲಾ ನದಿ ತೀರದ ಮನೆ, ಜಮೀನು, ಪ್ರಸಿದ್ಧ ದೇವಾಲಯಗಳು ಜಲಾವೃತ..!

ಈ ಸುದ್ದಿಯನ್ನು ಶೇರ್ ಮಾಡಿ

Kapila-River-1

ಮೈಸೂರು, ಆ.17- ಕಪಿಲಾ ನದಿ ತೀರದ ಮನೆಗಳು, ಜಮೀನುಗಳು ಜಲಾವೃತಗೊಂಡಿರುವುದರಿಂದ ನಂಜನಗೂಡಿನಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಇತಿಹಾಸ ಪ್ರಸಿದ್ಧ 16ಕಾಲು ಮಂಟಪ ಮುಳುಗಡೆಗೆ 2 ಅಡಿ ಮಾತ್ರ ಬಾಕಿ ಇದೆ. ಹಾಗೆಯೇ ಸ್ನಾನಘಟ್ಟ, ಪರಶುರಾಮ ದೇವಾಲಯ ಸಹ ನೀರಿನಿಂದ ಮುಳುಗಿದೆ. ನಂಜುಂಡೇಶ್ವರ ದೇವಾಲಯ ಕಡೆಗೆ ನೀರು ಹರಿದು ಬರುತ್ತಿದೆ. ವಕ್ಕಲಗೇರಿ, ಹಳ್ಳದಕೇರಿ ಸುತ್ತಮುತ್ತಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಕಪಿಲಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆಜ್ಜಿಗೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸುತ್ತೂರಿನಲ್ಲಿರುವ ಶ್ರೀ ಮಠದ ಗದ್ದಿಗೆಯವರೆಗೂ ನೀರು ಹರಿದಿದ್ದು, ಮತ್ತಷ್ಟು ನೀರು ಬಂದರೆ ಗದ್ದಿಗೆಯೂ ಸಹ ಮುಳುಗಲಿದೆ. ಜಮೀನುಗಳಲ್ಲಿ ನೀರು ನುಗ್ಗಿ ಕೆರೆಯಂತಾಗಿ ಬೆಳೆಗಳು ಸಂಪೂರ್ಣ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಕಬಿನಿ ಜಲಾಶಯಕ್ಕೆ 86ಸಾವಿರ ಕ್ಯೂಸೆಕ್‍ನಷ್ಟು ನೀರು ಹರಿದು ಬರುತ್ತಿತ್ತು. ಹೀಗಾಗಿ ಇಂದು ಬೆಳಗ್ಗೆ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಹಾಗೆಯೇ ಕೆಆರ್‍ಎಸ್‍ಗೆ 1ಲಕ್ಷದ 211 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೆಆರ್‍ಎಸ್ ಡ್ಯಾಂನಿಂದ ಒಂದು ಲಕ್ಷ 17 ಸಾವಿರದ 996 ಕ್ಯೂಸೆಕ್ ನೀರನ್ನು ಬೆಳಗ್ಗೆ ಹೊರ ಬಿಡಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 119.95 ಅಡಿಗಳಷ್ಟು ನೀರಿದೆ. ಸಂಜೆ ವೇಳೆಗೆ ಇನ್ನೂ ಹೆಚ್ಚಿನ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯ ಸುತ್ತಮುತ್ತಲಿನ ನಿವಾಸಿಗಳು ಈ ಕೂಡಲೇ ಸ್ಥಳಾಂತರಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಿರಿಯಾಪಟ್ಟಣದ ಬಳಿ ವಾಹನಗಳನ್ನು ತಡೆದು ಕಾವೇರಿ ಮೇಲ್ಸೇತುವೆ ಮೇಲೆ ಲಘು ವಾಹನ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಎಲ್ಲಾ ವಾಹನಗಳನ್ನು ಪಿರಿಯಾಪಟ್ಟಣದಲ್ಲೇ ತಡೆದು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Facebook Comments

Sri Raghav

Admin