ಶತ್ರು ರಾಷ್ಟ್ರ ಪಾಕ್ ಸೇರಿದಂತೆ, ಭೂತಾನ್,ನೇಪಾಳ, ಬಾಂಗ್ಲಾ, ಲಂಕಾದಿಂದಲೂ ವಾಜಪೇಯಿಗೆ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ನವದೆಹಲಿ, ಆ.17- ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಭಾರತದ ಬದ್ಧ ವೈರಿ ಪಾಕಿಸ್ತಾನದ ಗಣ್ಯಾತಿಗಣ್ಯರೂ ಕೂಡ ದುಃಖತಪ್ತರಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು ಅಜಾತಶತ್ರುವಿಗೆ ಸಂದ ವಿಶೇಷ ಗೌರವವಾಗಿತ್ತು. ಪಾಕಿಸ್ತಾನದೊಂದಿಗೆ ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳ ಅಧಿಪತಿಗಳ ನಿಯೋಗ ಇಂದು ದೆಹಲಿಗೆ ಭೇಟಿ ನೀಡಿ ಅಟಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವಾಂಜಲಿ ಸಮರ್ಪಿಸಿದೆ.

ಪಾಕಿಸ್ತಾನದ ಸರ್ಕಾರ ಮತ್ತು ಅತ್ಯುನ್ನತ ನಾಯಕರು ಇಂದು ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧದಲ್ಲಿ ಮಹತ್ವದ ಪರಿವರ್ತನೆಗೆ ಅಟಲ್ ಅಪಾರ ಕೊಡುಗೆ ನೀಡಿದ್ದಾರೆ. ಏಷ್ಯಾ ಖಂಡದಲ್ಲಿ ಪರಸ್ಪರ ಪ್ರಾದೇಶಿಕ ಸಹಕಾರಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹ ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ಭಾವಿ ಪ್ರಧಾನಮಂತ್ರಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶಹಭಾಝ್ ಷರೀಫ್ ಮೊದಲಾದವರು ಅಟಲ್ ಗುಣಗಾನ ಮಾಡಿದ್ದಾರೆ.

ಪಾಕಿಸ್ತಾನ ಕಾನೂನು ಸಚಿವ ಅಲಿ ಜಫರ್ ನೇತೃತ್ವದ ನಿಯೋಗ ಇಂದು ದೆಹಲಿಗೆ ಆಗಮಿಸಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿತು. ಈ ಹಿಂದೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರು ವಾಜಪೇಯಿ ಅವರನ್ನು ಭೇಟಿಯಾಗಿದ್ದಾಗ. ನೀವು ಪಾಕಿಸ್ತಾನದಲ್ಲಿ ಚುನಾವಣೆಗೆ ನಿಂತರೂ ನೀವು ಖಂಡಿತಾ ಗೆಲ್ಲುತ್ತೀರಿ. ಇದರಲ್ಲಿ ಅನುಮಾನವೇ ಇಲ್ಲ ಎಂದು ಅಟಲ್ ಅವರ ಲೋಕಪ್ರಿಯತೆಯನ್ನು ಹಾಡಿ ಹೊಗಳಿದ್ದರು.

ಭಾರತದ ಮಿತ್ರ ರಾಷ್ಟ್ರವಾದ ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್‍ಗ್ಯಲ್ ವಾಂಗ್ಟುಕ್ ಮತ್ತು ರಾಜಪರಿವಾರದ ನಿಯೋಗ ಹಿಮಾಲಯ ರಾಷ್ಟ್ರ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾಮಲಿ, ದ್ವೀಪರಾಷ್ಟ್ರ ಶ್ರೀಲಂಕಾ ವಿದೇಶಾಂಗ ವ್ಯವಹಾರಗಳ ಮಂತ್ರಿ ಲಕ್ಷ್ಮಣ್ ಕಿರಿಯೆಲ್ಲಾ, ಬಾಂಗ್ಲಾದೇಶದ ಹಿರಿಯ ಸಚಿವ ಮಹಮದ್ ಅಲಿ ಸೇರಿದಂತೆ ಏಷ್ಯಾದ ರಾಷ್ಟ್ರಗಳ ಅಗ್ರ ನಾಯಕರ ನಿಯೋಗವೂ ಇದು ದೆಹಲಿಗೆ ಆಗಮಿಸಿ ಅಟಲ್‍ಗೆ ಅಂತಿಮ ನಮನ ಸಲ್ಲಿಸಿತು.

Facebook Comments

Sri Raghav

Admin