ಬಡ್ತಿ ಮೀಸಲು ನಿರಾಕರಣೆಗೆ ಕೆನೆ ಪದರ ಅನ್ವಯಿಸಲಾಗದು : ಸುಪ್ರೀಂಗೆ ಕೇಂದ್ರ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court
ನವದೆಹಲಿ, ಆ.17- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಗಳ ಮೀಸಲಾತಿಯ ಪ್ರಯೋಜನಗಳನ್ನು ನಿರಾಕರಿಸಲು ಕೆನೆಪದರ (ಕ್ರೀಮಿ ಲೇಯರ್) ಪರಿಕಲ್ಪನೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಕೇಂದ್ರ ಸರ್ಕಾರದ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಎಸ್‍ಸಿ-ಎಸ್‍ಟಿ ಸಮುದಾಯಗಳು ಮತ್ತು ಹಿಂದುಳಿದ ವರ್ಗಗಳಲ್ಲಿನ ಸರ್ಕಾರಿ ಉದ್ಯೋಗಿಗಳಿಗೆ ಪದೋನ್ನತಿ ಕೋಟಾದ ಅನುಕೂಲ ಮತ್ತು ಪ್ರಯೋಜನಗಳನ್ನು ಅನ್ವಯಿಸಲು ಸಾಧ್ಯವೇ ಎಂದು ಒಂದು ಹಂತದಲ್ಲಿ ಪಂಚ ನ್ಯಾಯಾಧೀಶರ ಪೀಠವು ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಪರ ಉತ್ತರ ನೀಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಎಸ್‍ಸಿ/ಎಸ್‍ಟಿ ಮತ್ತು ಹಿಂದುಳಿದ ವರ್ಗಗಳ ಜನರ ಪೈಕಿ ಕೆಲವರಲ್ಲಿ ಜಾತಿ ಕಳಂಕ ಇರಬಹುದಾದ ಕಾರಣ ಬಡ್ತಿ ಮೀಸಲಾತಿಯಲ್ಲಿನ ಪ್ರಯೋಜನಗಳನ್ನು ನಿರಾಕರಿಸಲು ಕೆನೆಪದರ ಅನ್ವಯಿಸಲು ಸಾಧ್ಯವಾಗದು ಎಂದು ಸಮಜಾಯಿಷಿ ನೀಡಿದರು.

ಜಾತಿ ತಾರತಮ್ಯ ವಿಷಯಗಳು ಈಗಲೂ ನಮ್ಮ ದೇಶದಲ್ಲಿರುವುದು ದುರದೃಷ್ಟಕರ ಸಂಗತಿ ಎಂದು ಅಭಿಪ್ರಾಯಪಟ್ಟ ವೇಣುಗೋಪಾಲ್, ಸರ್ಕಾರದ ನಿಲುವನ್ನು ಹಿರಿಯ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್, ಸಂಜಯ್ ಕಿಶನ್‍ಕೌಲ್ ಮತ್ತು ಇಂದುಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನ ಪೀಠಕ್ಕೆ ತಿಳಿಸಿದರು. ಈ ಪ್ರಕರಣ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರಿದಿದೆ.

Facebook Comments

Sri Raghav

Admin