ಮಡಿಕೇರಿಯ ಭಾರಿ ಮಳೆಗೆ ಗುಡ್ಡ ಕುಸಿದು 2 ಕುಟುಂಬದವರು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

Madikeri-rain

ಬೆಂಗಳೂರು, ಆ.17-ಮಡಿಕೇರಿಯಲ್ಲಿ ಮಳೆಯ ಅವಘಡಕ್ಕೆ ನೂರಾರು ಜನ ಅತಂತ್ರರಾಗಿದ್ದಾರೆ. ಹಲವೆಡೆ ನಿರಾಶ್ರಿತರಾಗಿರುವವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ನಡುವೆ ಮಡಿಕೇರಿ ಸಮೀಪದ ಮೇಘತಾಳು ಗ್ರಾಮದಲ್ಲಿ ಗುಡ್ಡ ಕುಸಿದು ಎರಡು ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಉಮೇಶ್, ಚಂದ್ರಾವತಿರೈ, ಹೊನ್ನಮ್ಮ, ಚಂದು ಗೋಪಾಲ್ ಮುಂತಾದವರು ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೆದಕಲ್ ಸಮೀಪದ ಖಂಡನಕೊಲ್ಲಿ ಬೆಟ್ಟದ ಹಾಲೇರಿಯಲ್ಲಿ 200 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಂದೂರು ಬಳಿ 150 ರಿಂದ 200 ಮಂದಿ ಬೆಟ್ಟದಲ್ಲಿ ಸಿಲುಕಿದ್ದಾರೆ. ಇವರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಮೂಲಕ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಮಂಜು ಮತ್ತು ಮಳೆಯಿಂದ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಕೊಡಗಿನ ಪ್ರಮುಖ ಸೇತುವೆ ಬೇತ್ರಿ ಸಂಪರ್ಕ ಬಂದ್ ಆಗಿದೆ. ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಕಾವೇರಿ ನದಿಗೆ ನಿರ್ಮಿಸಿದ ಮೊದಲ ಸೇತುವೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಮಡಿಕೇರಿ ಸಮೀಪದ ಕಾಟಗೇರಿ ಬಳಿ ಗುಡ್ಡ ಕುಸಿದು ಮೂವರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಹಟ್ಟಿ ಹೊಳೆ ನೀರು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ, ನಾಪೋಕ್ಲು, ಕೊಟ್ಟುಮುಡಿ, ಅಯ್ಯಂಗೇರಿ, ಬೆಟ್ಟಗೇರಿ, ಅವಂದೂರು, ಗಾಳಿಬೀಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಇಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ. ಸಂತ್ರಸ್ಥರ ನೆರವಿಗೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಲವೆಡೆ ಗಂಜಿ ಕೇಂದ್ರಗಳಿಗೂ ನೀರು ನುಗ್ಗಿದೆ.  ಮಡಿಕೇರಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ವಿದ್ಯುತ್ ಕಡಿತ, ಮೊಬೈಲ್ ಸಂಪರ್ಕ ಕಡಿತವಾಗಿರುವುದರಿಂದ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.

Facebook Comments

Sri Raghav

Admin