ವಾಜಪೇಯಿ ಅವರ ರೋಚಕ ಜೀವನದ ಜರ್ನಿ ಹಾಗೂ ರಾಜಕೀಯ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Vajpayee--00011

ಅಟಲ್ ಬಿಹಾರಿ ವಾಜಪೇಯಿ ಅವರು 1924, ಡಿಸೆಂಬರ್ 25ರಂದು ಕ್ರಿಸ್‍ಮಸ್ ಹಬ್ಬದ ದಿನ ಜನಿಸಿದರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯ ರಾಜಕಾರಣಿಯಾಗಿ ತಮ್ಮ ಅಪೂರ್ವ ಯೋಗದಾನವನ್ನು ನೀಡಿದ್ದ ಅವರು ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ವಿಶ್ವದಲ್ಲಿ ಹೆಸರುವಾಸಿಯಾಗಿದ್ದಾರೆ.

# ಜನನ, ಬಾಲ್ಯ, ವಿದ್ಯಾಭ್ಯಾಸ :
ಅಟಲ್ ಬಿಹಾರಿ ವಾಜಪೇಯಿ ಅವರು 1924, ಡಿಸೆಂಬರ್ 25ರಂದು ಕ್ರಿಸ್‍ಮಸ್ ದಿನದಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಒಬ್ಬ ಕವಿ, ಮತ್ತು ಸಾಮಾನ್ಯ ಶಾಲೆಯ ಉಪಾಧ್ಯಾಯರಾಗಿದ್ದರು. ಅಟಲ್ ಅವರ `ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ’ ಅವರು ವಿದ್ವಾಂಸರಾಗಿದ್ದರು. ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದ ವಾಜಪೇಯಿ ಅವರು, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ್ದರು. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು.

ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಟಲ್ ಅವರು 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಆರ್‍ಎಸ್‍ಎಸ್ ಸೇರ್ಪಡೆಯಾದರು. `ವೀರ ಅರ್ಜುನ’ ಹಾಗೂ `ಪಾಂಚಜನ್ಯ’ ಎಂಬ ಎರಡು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಕವಿಯಾಗಿ ಸೇವೆ ಸಲ್ಲಿಸಿದರು.

# ರಾಜಕೀಯ ಜೀವನ :
ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾಗಿದ್ದ ಆಟಲ್ ಬಿಹಾರಿ ವಾಜಪೇಯಿ ಅವರು, ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಸಂಘದ ಮುಖ್ಯಸ್ಥರಾಗಿದ್ದರು. ವಾಜಪೇಯಿಯವರು ಲೋಕಸಭೆಗೆ 1957ರಲ್ಲಿ ಮೊದಲ ಬಾರಿಗೆ ಆಯ್ಕೆಯಾದರು. 1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಮೊರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಮಾರ್ಚ್ 1977ರಿಂದ ಜುಲೈ 1979 ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಆಟಲ್ ಅವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‍ಎಸ್‍ಎಸ್‍ನ ಒತ್ತಡದ ಮೇರೆಗೆ ಬಂದಿತ್ತು ಎಂದು ಹೇಳಲಾಗುತ್ತದೆ.

ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು, ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

# ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ :
1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದ ಏಕೈಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿಜೆಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿಜೆಪಿಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು. ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು. ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್‍ನ ಎಚ್.ಡಿ. ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.

#  ಪ್ರಧಾನಮಂತ್ರಿಯಾಗಿ ಮೂರನೇ ಕಾರ್ಯಾವಧಿ
ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆ ಬಿಜೆಪಿ ಮುನ್ನಡೆ ಸಾಧಿಸಿತು. ಯುಪಿಎ ಮಿತ್ರ ಪಕ್ಷಗಳು ಕೂಡ ಮುನ್ನಡೆ ಸಾಧಿಸಿದವು. ಬಿಜೆಪಿ ನೇತೃತ್ವದ ಎನ್‍ಡಿಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು. ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.

Facebook Comments

Sri Raghav

Admin