ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಸಾರ್ವಜನಿಕರು-ಕೈಗಾರಿಕೋದ್ಯಮಿಗಳಲ್ಲಿ ಡಿಕೆಶಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar--01

ಬೆಂಗಳೂರು,ಆ.18- ಕೊಡಗು, ಕೇರಳ, ಮಲೆನಾಡು ಭಾಗಗಳಲ್ಲಿ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದರು. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗು, ಮಂಗಳೂರು ಭಾಗದಲ್ಲಿ ಮಳೆಯಿಂದ ಬಹಳಷ್ಟು ಮಂದಿ ನಿರ್ವಸತಿಗರಾಗಿದ್ದಾರೆ. ಅವರಿಗೆ ಆಹಾರ ಬಟ್ಟೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರ ಮೂಲಭೂತ ಅಗತ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ತಮಗೆ ಬಂದಿರುವ ಮನವಿಯ ಅನುಸಾರ ತಾವು ರಾಮನಗರ ಜಿಲ್ಲಾಡಳಿತದ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಂಡಿದ್ದೇನೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಾಸಕರ ಸಹಕಾರದಿಂದ ಬಟ್ಟೆ, ನೀರು, ಆಹಾರ, ಮತ್ತಿತರ ಸೌಲಭ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿರುವ ಗಾರ್ಮೆಂಟ್ಸ್ ಪ್ಯಾಕ್ಟರಿಗಳು ತಮ್ಮಲ್ಲಿನ ಸೆಕೆಂಡ್ಸ್ ಬಟ್ಟೆಗಳನ್ನು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು ಎಂದು ಮನವಿ ಮಾಡಲಾಗಿದೆ.

ಹೊದಿಕೆ, ಪಂಚೆ, ಸೀರೆ, ಶರ್ಟ್ ಸೇರಿದಂತೆ ದಿನ ಬಳಕೆಯ ಬಟ್ಟೆಗಳನ್ನು ಸಾರ್ವಜನಿಕರು ದಾನವಾಗಿ ನೀಡಬೇಕು. ಆರ್ಥಿಕ ನೆರವು ಕೂಡ ನೀಡಬಹುದು ಎಂದು ಅವರು ಹೇಳಿದರು. ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ.ಜೆ.ಶ್ರೀನಿವಾಸ್ ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ. ಅವರ ಮೊ: 98459701510, 8073 25236 ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 2727377, ಸಚಿವರ ಆಪ್ತ ಸಹಾಯಕ ಮೊ: 9606006699 ಇಲ್ಲಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.  ಜೊತೆಗೆ ವೈದ್ಯಕೀಯ ನೆರವಿಗಾಗಿ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಮೆಡಿಕಲ್ ಕಾಲೇಜುಗಳಿಗೂ ಮನವಿ ಮಾಡಲಾಗಿದೆ.

ಎಲ್ಲಾ ಕಾಲೇಜುಗಳಿಂದಲೂ ತಲಾ ಒಂದೊಂದು ವೈದ್ಯಕೀಯ ತಂಡವನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಕೇರಳ ಹಾಗೂ ಕರ್ನಾಟಕದ ನೆರೆಪೀಡಿತ ಭಾಗಗಳಿಂದ ಬೇಡಿಕೆ ಬಂದಾಗ ತಕ್ಷಣ ತಂಡವನ್ನು ರವಾನಿಸಬೇಕೆಂದು ಮನವಿ ಮಾಡಿರುವುದಾಗಿ ಹೇಳಿದರು. ನೆರೆ ಸಂತ್ರಸ್ತರಿಗಾಗಿ ಸಾರ್ವಜನಿಕರು ನೀಡಿರುವ ವಸ್ತುಗಳು ಹಾಗೂ ಇತರ ನೆರವನ್ನು ದುರುಪಯೋಗವಾಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿ ಕಚೇರಿಯನ್ನು ಕೇಂದ್ರೀಕರಿಸಿರುವುದಾಗಿ ತಿಳಿಸಿದರು.

Facebook Comments

Sri Raghav

Admin