ಗೋ ಕಳ್ಳನೆಂಬ ಶಂಕೆಯಿಂದ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಈ ಸುದ್ದಿಯನ್ನು ಶೇರ್ ಮಾಡಿ

lynching

ಗುವಾಹತಿ, ಆ.18-ಉದ್ರಿಕ್ತ ಗುಂಪಿನ ಸಾಮೂಹಿಕ ಥಳಿತ ಮತ್ತು ಹತ್ಯೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದ್ದರೂ ಇಂಥ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಈಶಾನ್ಯ ರಾಜ್ಯ ಅಸ್ಸಾಂನ ಬಿಶ್ವನಾಥ್ ಜಿಲ್ಲೆಯಲ್ಲಿ ಗೋ ಕಳ್ಳರೆಂಬ ಶಂಕೆಯಿಂದಾಗಿ ಜನರ ಗುಂಪಿನ ಥಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟು, ಇತರ ಮೂವರು ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ಅಸ್ಸಾಂ ರಾಜಧಾನಿ ಗುವಾಹತಿಯಿಂದ 250 ಕಿ.ಮೀ. ದೂರದ ದಿಪ್ಲುಂಗಾ ಚಹಾ ತೋಟದ ಕಾರ್ಮಿಕರಾದ ಆದಿವಾಸಿ ಸಮುದಾಯದ 11 ಜನರನ್ನು ಈ ಸಂಬಂಧ ಬಂಧಿಸಲಾಗಿದೆ.

ಗುರುವಾರ ಈ ಘಟನೆ ನಡೆದಿದೆ. ಗೋ ಕಳ್ಳಸಾಗಣೆದಾರರೆಂಬ ಗುಮಾನಿಯಿಂದ ಪುಟ್ಟ ಪಿಕಪ್ ವ್ಯಾನೊಂದನ್ನು ಅಡ್ಡಗಟ್ಟಿದ ಉದ್ರಿಕ್ತ ಗುಂಪು ಅದರಲ್ಲಿದ್ದ ದೇಬೆನ್ ರಾಜ್ ಬೋಂಗ್ಶಿ, ಪೂಲ್‍ಚಂದ್ ಸಾಹು, ಬಿಜೋಯ್ ನಾಯಕ್ ಮತ್ತು ಪುಜೇನ್ ರಾಜ್ ಬೋಂಗ್ಶಿ ಎಂಬುವರನ್ನು ಭೀಕರವಾಗಿ ಥಳಿಸಿತು. ತೀವ್ರ ಗಾಯಗೊಂಡ ದೇಬನ್ ರಾಜ್ ಬೋಂಗ್ಶಿ ಮೃತಪಟ್ಟರು. ತೀವ್ರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರೂ ಕೂಡ ಆದಿವಾಸಿ ಸಮುದಾಯದವರೇ ಆಗಿದ್ದಾರೆ.

ಈ ವ್ಯಾನಿನಲ್ಲಿದ್ದ ಐದನೇ ವ್ಯಕ್ತಿ ಪಾಪು ನಾಯಕ್ ಗುಂಪಿನ ದಾಳಿಗೂ ಮುನ್ನವೇ ಪರಾರಿಯಾದ.    ಉದ್ರಿಕ್ತ ಗುಂಪು ನಾಲ್ವರ ಮೇಲೆ ಹಲ್ಲೆ ನಡೆಸುವ ದೃಶ್ಯಗಳು ಹಾಗೂ ತೀವ್ರ ರಕ್ತಸ್ರಾವದಿಂದ ಹಲ್ಲೆಗೊಳ್ಳಗಾದವರು ಬಿಟ್ಟುಬಿಡುವಂತೆ ಅಂಗಲಾಚುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಈ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೋಲೀಸ್ ಆಧಿಕಾರಿ ದಿಗಂತ್ ಕುಮಾರ್ ಚೌಧರಿ ಹೇಳಿದ್ದಾರೆ.

Facebook Comments

Sri Raghav

Admin