ನರಕದಂತಾದ ಭೂಲೋಕದ ಸ್ವರ್ಗ, ಕೊಡಗಿನಲ್ಲಿ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Kodagu--01
ಬೆಂಗಳೂರು, ಆ.18- ದಕ್ಷಿಣ ಕಾಶ್ಮೀರ, ಭೂಲೋಕದ ಸ್ವರ್ಗವೆಂದೇ ಪ್ರಖ್ಯಾತವಾಗಿದ್ದ ಕೊಡಗು ಭಾರೀ ಮಳೆಗೆ ಅಕ್ಷರಶಃ ಜರ್ಜರಿತಗೊಂಡಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ರೌದ್ರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, 6ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಜನ ಕಣ್ಮರೆಯಾಗಿದ್ದು, ಬೆಟ್ಟಗುಡ್ಡಗಳು ಧರೆಗುರುಳಿ ಅಪಾರ ಆಸ್ತಿಪಾಸ್ತಿ ಹಾನಿಗೀಡಾಗಿ ಮನೆಗಳು ಉರುಳಿಬಿದ್ದಿದ್ದು, ಜಿಲ್ಲಾಡಳಿತ, ಸೇನೆ ಕಾರ್ಯಾಚರಣೆಗಿಳಿದಿದೆ.

ಎನ್‍ಡಿಆರ್‍ಎಫ್, ಅರಣ್ಯ ಇಲಾಖೆ, ಭೂ ಸೇನೆಯ ಎರಡು ಪಡೆ, ಡೋಗ್ರಾ ರೆಜ್ಮೆಂಟ್‍ನ ಎರಡು ಪಡೆ, ಅಗ್ನಿಶಾಮಕದಳ ಸೇರಿದಂತೆ ಹಲವು ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸೇನಾಪಡೆಯಿಂದ ಚುರುಕಿನ ಕಾರ್ಯಾಚರಣೆ ಇಂದು ಬೆಳಗ್ಗಿನಿಂದಲೇ ನಡೆದಿದ್ದು, ಸೇನಾ ಸಿಬ್ಬಂದಿಗಳು ತಮ್ಮ ಜೀವನ್ನು ಲೆಕ್ಕಿಸದೆ ಅಪಾಯದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿದ್ದಾರೆ.

Kodagu--05

ಕೊಯ್ನಾಡು, ಮಲೆನಾಡಿನಲ್ಲಿ ಗುಡ್ಡಕುಸಿದು ಹಲವರು ಬೆಟ್ಟದ ಮೇಲೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಎನ್‍ಡಿಆರ್‍ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ನೂರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವರುಣನ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವಾರು ಮಂದಿ ಕಣ್ಮರೆಯಾಗಿದ್ದು, ಕಣ್ಮರೆಯಾದವರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವಿದ್ಯುತ್ ಕಡಿತಗೊಂಡು ಮೊಬೈಲ್ ಚಾರ್ಜ್ ಇಲ್ಲದೆ ಸಂಪರ್ಕಕ್ಕೂ ಅಡ್ಡಿಯಾಗಿದೆ. ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಆಂತಕ ಮಡಿಕೇರಿ ತಾಲ್ಲೂಕಿನ ಜೋಡ್‍ಪಾಲದಲ್ಲೂ ಬೆಟ್ಟ ಕುಸಿಯುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

Kodagu--04

14ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚೇರಂಬಾಣೆ ಸರ್ಕಾರಿ ಶಾಲೆಯಲ್ಲಿ 400ಜನ ಆಶ್ರಯ ಪಡೆದಿದ್ದಾರೆ. ಚೇರಂಬಾಣೆ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಹಲವರಿಗೆ ಆಶ್ರಯ ನೀಡಿದ್ದಾರೆ. ಎತ್ತೂರು, ಎಸಲೂರು ಸಮೀಪದ ಓಡಹಳ್ಳಿ, ಚೌಹಳ್ಳಿ, ಚಂಗಡಹಳ್ಳಿಯಲ್ಲೂ ಕೂಡ ಭೂ ಕುಸಿದ ಸಂಭವಿಸಿದೆ. ಎಲ್ಲೆಡೆ ಕಾರ್ಯಾಚರಣೆ ನಡೆಸಿ ಸಂಪರ್ಕ ಕಲ್ಪಿಸಬೇಕಾಗಿದೆ. ಕೊಡುಗು ಜಿಲ್ಲೆಯ ವಿಶೇಷವೆಂದರೆ ಪರಿರ್ಯಾಯ ಮಾರ್ಗಗಳಿಲ್ಲ. ಇರುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ಮೊದಲು ಸರಿಪಡಿಸಬೇಕಾಗಿದೆ. ಅದಕ್ಕಾಗಿ ಜಿಲ್ಲಾಡಳಿತ, ಸೇನಾಪಡೆ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದೆ.

Kodagu--03

ಕೊಡಗಿನ ಜನರ ನೆರವಿಗೆ ಮಹಾಪೂರವೇ ಹರಿದು ಬಂದಿದೆ. ಕೊಡವ ಸಮಾಜ, ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರ, ಬಿಬಿಎಂಪಿ, ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಕೊಡಗಿನ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಗುಡ್ಡ ಕುಸಿತ ಪ್ರಕರಣಗಳು ಸಾಮಾನ್ಯ ಎಂಬಂತಾಗಿದೆ. ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಕೊಡಗು-ಮಂಗಳೂರು ಮಾರ್ಗದಲ್ಲಿ ಗುಡ್ಡ ಕುಸಿತದಿಂದ ಸಂಚಾರ ಕಡಿತಗೊಂಡಿತ್ತು. ನಿನ್ನೆ ರಾತ್ರಿ ಜೋಡಪಲ್ಲಿ ಎಂಬಲ್ಲಿ ಮತ್ತೊಂದು ಗುಡ್ಡ ಕುಸಿದಿದೆ. ಕುಸಿದ ಗುಡ್ಡ ತೆರವುಗೊಳಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡುವುದು ಸವಾಲಾಗಿ ಪರಿಣಮಿಸಿದೆ.

Kodagu--02

ಕಲ್ಲೂರು ಎಂಬ ಹಳ್ಳಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಜನವಸತಿ ಪ್ರದೇಶವೇ ಕೊಚ್ಚಿ ಹೋಗಿದೆ. ಇಲ್ಲಿ ಉಂಟಾದ ಹಾನಿಯ ಬಗ್ಗೆ ಈವರೆಗೆ ಮಾಹಿತಿಯೇ ಇಲ್ಲ. ಸೂಳ್ಯಾದಲ್ಲಿ 300 ಮಂದಿ ನಿರಾಶ್ರಿತರಾಗಿದ್ದಾರೆ. ಇವರಿಗೆಲ್ಲ ಅರಂತೋಡು ತೆಕ್ಕಿಲ ಸಮುದಾಯ ಭವನದಲ್ಲಿ ಆಶ್ರಯ ಒದಗಿಸಲಾಗಿದೆ. ಕಳೆದೆರಡು ದಿನಗಳಿಂದ ಗುಡ್ಡದ ಮೇಲೆ ಆಶ್ರಯ ಪಡೆದಿದ್ದ 200ಕ್ಕೂ ಹೆಚ್ಚು ಮಂದಿಯನ್ನು ಸೇನಾ ಪಡೆ ಕಾರ್ಯಾಚರಣೆ ನಡೆಸಿ ರಕ್ಷಿಸಿ ಗಂಜಿ ಕೇಂದ್ರಗಳಿಗೆ ರವಾನಿಸಿದೆ. ಸಾವಿರಾರು ಮಂದಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ.

ಕೊಡಗಿನಲ್ಲಿ ಉಂಟಾಗಿರುವ ಮಹಾ ಮಳೆ ಪಕ್ಕದ ಮೈಸೂರಿಗೂ ತಟ್ಟಿದೆ. ಕಾವೇರಿ, ಕಪಿಲಾ ನದಿಗಳು ಉಕ್ಕಿ ಹರಿಯುತ್ತಿವೆ. ಕೊಡಗಿನ ಮಳೆಯಿಂದ ಟಿ.ನರಸೀಪುರ ಬಳಿಯ ಹೆಮ್ಮಿಗೆ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ತಲಕಾಡು, ಟಿ.ನರಸೀಪುರ ಸಂಚಾರ ಬಂದ್ ಮಾಡಲಾಗಿದೆ.
ಕಬಿನಿ ಜಲಾಶಯದಿಂದ 80ಸಾವಿರ ಕ್ಯೂಸೆಕ್ ನೀರನ್ನು ನಿತ್ಯ ಬಿಡುತ್ತಿರುವುದರಿಂದ ಮಲ್ಲನಮೂಲೆ ಮಠದ ಬಳಿಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಇಲ್ಲಿನ ಬಸವೇಶ್ವರ ದೇವಾಲಯವು ಕೂಡ ಜಲಾವೃತಗೊಂಡಿದೆ.

Facebook Comments

Sri Raghav

Admin