ಕೇರಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ, 500 ಕೋಟಿ ರೂ. ತುರ್ತು ನೆರವು ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Kerala-Modi--01

ತಿರುವನಂತಪುರಂ, ಆ.18-ದೇವರ ನಾಡು ಕೇರಳದಲ್ಲಿ ಶತಮಾನದಲ್ಲೇ ಕಂಡು ಕೇರಳರಿಯದ ಜಲಪ್ರಳಯದಿಂದ ಸತ್ತವರ ಸಂಖ್ಯೆ 326ಕ್ಕೇರಿದೆ. ಕರಾವಳಿ ರಾಜ್ಯ ನಿರಂತರ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ನರಕ ಸದೃಶವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೆರೆ ಪೀಡಿತ ಪ್ರದೇಶಗಳಲ್ಲಿ ಇಂದು ವೈಮಾನಿಕ ಸಮೀಕ್ಷೆಗೆ ಮುನ್ನ ಉನ್ನತಮಟ್ಟದ ಸಭೆಯಲ್ಲಿ ಪರಿಸ್ಥಿತಿ ಅವಲೋಕಿಸಿದರು. ವರುಣದ ಕೇಕೆಯಿಂದ ನಲುಗುತ್ತಿರುವ ಕೇರಳಕ್ಕೆ 500 ಕೋಟಿ ರೂ.ಗಳ ತುರ್ತು ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.

ನಿನ್ನೆ ರಾತ್ರಿ ರಾಜಧಾನಿ ತಿರುವನಂತಪುರಂಗೆ ತೆರೆಳಿದ ಮೋದಿ ಅವರನ್ನು ರಾಜ್ಯಪಾಲ ಪಿ.ಸತ್ಯಶಿವನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ್ ಅಲ್ಫೋನ್ಸ್ ಹಾಗೂ ಉನ್ನತಾಧಿಕಾರಿಗಳು ಬರಮಾಡಿಕೊಂಡರು. ತಿರುವನಂತಪುರಂನಿಂದ ಕೊಚ್ಚಿಗೆ ತೆರೆಳಿದ ಪ್ರಧಾನಿಯವರ ವೈಮಾನಿಕ ಸಮೀಕ್ಷೆಗೆ ಪ್ರತಿಕೂಲ ವಾತಾವರಣ ಅಡ್ಡಿಯಾಯಿತು. ಹೀಗಾಗಿ ಹೆಲಿಕಾಪ್ಟರ್ ಹಾರಾಟವನ್ನು ಕೆಲಕಾಲ ಮುಂದೂಡಲಾಯಿತು.

ಬಳಿಕ ಉನ್ನತ ಮಟ್ಟದ ಸಭೆ ನಡೆಸಿದ ಅವರು ರಾಜ್ಯದ ಜಲಪ್ರಳಯ ಪರಿಸ್ಥಿತಿಯ ಪರಾಮರ್ಶಿಸಿದರು. ಪಿಣರಾಯಿ ವಿಜಯನ್, ಅಲ್ಫೋನ್ಸ್ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಪ್ರಧಾನಿ ಅವರಿಗೆ ನೆರೆ ಹಾವಳಿಯಿಂದ ಉಂಟಾದ ಭಾರೀ ಹಾನಿ ಮತ್ತು ನಷ್ಟದ ಬಗ್ಗೆ ಮಾಹಿತಿ ನೀಡಿದರು. ಕೇರಳದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ 500 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಘೋಷಿಸಿದರು.

Modi-KEraal

ಮೋದಿ ಅವರು ನಂತರ ಕೊಚ್ಚಿಯಿಂದ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡು ಅಲ್ಲಿನ ಭೀಕರ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದರು. ಪಿಣರಾಯಿ ವಿಜಯನ್, ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಮತ್ತು ಉನ್ನತಾಧಿಕಾರಿಗಳು ಜತೆಗಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದ 14 ಜಿಲ್ಲೆಗಳಲ್ಲಿ ಸುರಿಯುತ್ತಿರುವ ಕುಂಭ್ರದ್ರೋಣ ಮಳೆ, ಪ್ರವಾಹ ಹಾಗೂ ಭೂಕುಸಿತಗಳಿಂದ ಈವರೆಗೆ 325ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 2.25 ಲಕ್ಷಕ್ಕೂ ಹೆಚ್ಚು ಮಂದಿ 140ಕ್ಕೂ ಅಧಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ರಾಜ್ಯದಲ್ಲಿರುವ ಬಹುತೇಕ ಎಲ್ಲ ನದಿಗಳು ಮತ್ತು ಉಪ ನದಿಗಳು ಅಪಾಯ ಮಟ್ಟ ಮೀರಿ ಭೋರ್ಗರೆಯುತ್ತಿವೆ. 80 ಅಣೆಕಟ್ಟುಗಳ ಎಲ್ಲ ಗೇಟ್‍ಗಳನ್ನು ತೆರೆಯಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ 80,000ಕ್ಕೂ ಹೆಚ್ಚು ಜನರನ್ನು ನಿನ್ನೆ ರಕ್ಷಿಸಲಾಗಿದೆ.   ಸಂತ್ರಸ್ತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಗಳು(ಎನ್‍ಡಿಎಸ್‍ಎಫ್) ಹಗಲು ರಾತ್ರಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಹೆಲಿಕಾಪ್ಟರ್‍ಗಳು, ಲೈಫ್ ಬೋಟ್‍ಗಳನ್ನು ಜನರ ರಕ್ಷಣೆಗೆ ಬಳಸಲಾಗುತ್ತಿದೆ.

ನೆರವಿನ ಮಹಾಪೂರ : ಜಲ ಪ್ರಳಯದಿಂದ ನಲುಗುತ್ತಿರುವ ಕೇರಳಗೆ ವಿವಿಧ ರಾಜ್ಯಗಳಿಂದ ನೆರವಿನ ಮಹಾಪೂರವೂ ಹರಿದು ಬರುತ್ತಿದೆ. ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳು ತಲಾ 10 ಕೋಟಿ ರೂ.ಗಳ ಪರಿಹಾರ ಘೋಷಿಸಿವೆ.

Facebook Comments

Sri Raghav

Admin