ಕೊಡಗಿಗೆ ಹರಿದುಬಂತು ನೆರವಿನ ಮಹಾಪೂರ, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

Shobha--02

ಬೆಂಗಳೂರು, ಆ.18- ದಕ್ಷಿಣ ಕಾಶ್ಮೀರ, ಭೂಲೋಕದ ಸ್ವರ್ಗವೆಂದೇ ಪ್ರಖ್ಯಾತವಾಗಿದ್ದ ಕೊಡಗು ಭಾರೀ ಮಳೆಗೆ ಅಕ್ಷರಶಃ ಜರ್ಜರಿತಗೊಂಡಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ರೌದ್ರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, 6ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬೆಟ್ಟಗುಡ್ಡಗಳು ಧರೆಗುರುಳಿ ಅಪಾರ ಆಸ್ತಿಪಾಸ್ತಿ ಹಾನಿಗೀಡಾಗಿ ಮನೆಗಳು ಉರುಳಿಬಿದ್ದಿವೆ. ಅದರಡಿಯಲ್ಲಿ ಕೆಲವು ಸಿಲುಕಿರುವ ಆಸಧ್ಯತೆ ಇದ್ದು, ಜಿಲ್ಲಾಡಳಿತ, ಸೇನೆ ಕಾರ್ಯಾಚರಣೆ ತೀವ್ರಗೊಳಿಸಿವೆ. ಎನ್‍ಡಿಆರ್‍ಎಫ್, ಅರಣ್ಯ ಇಲಾಖೆ, ಭೂ ಸೇನೆಯ ಎರಡು ಪಡೆ, ಡೋಗ್ರಾ ರೆಜ್ಮೆಂಟ್‍ನ ಎರಡು ಪಡೆ, ಅಗ್ನಿಶಾಮಕದಳ ಸೇರಿದಂತೆ ಹಲವು ಪಡೆಗಳು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಸೇನಾಪಡೆಯಿಂದ ಚುರುಕಿನ ಕಾರ್ಯಾಚರಣೆ ಇಂದು ಬೆಳಗ್ಗಿನಿಂದಲೇ ನಡೆದಿದ್ದು, ಸೇನಾ ಸಿಬ್ಬಂದಿಗಳು ತಮ್ಮ ಜೀವನ್ನು ಲೆಕ್ಕಿಸದೆ ಅಪಾಯದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿದ್ದಾರೆ. ಕೊಯ್ನಾಡು, ಮದೆನಾಡಿನಲ್ಲಿ ಗುಡ್ಡಕುಸಿದು ಹಲವರು ಬೆಟ್ಟದ ಮೇಲೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಎನ್‍ಡಿಆರ್‍ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ನೂರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

WhatsApp Image 2018-08-18 at 10.58.22 AM

ಕೊಡಗು ಜಿಲ್ಲೆಯಲ್ಲಿ ವರುಣನ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವಾರು ಮಂದಿ ಕಣ್ಮರೆಯಾಗಿದ್ದು, ಕಣ್ಮರೆಯಾದವರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವಿದ್ಯುತ್ ಕಡಿತಗೊಂಡು ಮೊಬೈಲ್ ಚಾರ್ಜ್ ಇಲ್ಲದೆ ಸಂಪರ್ಕಕ್ಕೂ ಅಡ್ಡಿಯಾಗಿದೆ. ಕ್ಷಣ ಕ್ಷಣಕ್ಕೂ ಆಂತಕ ಹೆಚ್ಚುತ್ತಿದೆ. ಮಡಿಕೇರಿ ತಾಲ್ಲೂಕಿನ ಜೋಡ್‍ಪಾಲದಲ್ಲೂ ಬೆಟ್ಟ ಕುಸಿಯುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

14ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚೇರಂಬಾಣೆ ಸರ್ಕಾರಿ ಶಾಲೆಯಲ್ಲಿ 400ಜನ ಆಶ್ರಯ ಪಡೆದಿದ್ದಾರೆ. ಚೇರಂಬಾಣೆ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಹಲವರಿಗೆ ಆಶ್ರಯ ನೀಡಿದ್ದಾರೆ. ಎತ್ತೂರು, ಎಸಲೂರು ಸಮೀಪದ ಓಡಹಳ್ಳಿ, ಚೌಹಳ್ಳಿ, ಚಂಗಡಹಳ್ಳಿಯಲ್ಲೂ ಕೂಡ ಭೂ ಕುಸಿತ ಸಂಭವಿಸಿದೆ. ಎಲ್ಲೆಡೆ ಕಾರ್ಯಾಚರಣೆ ನಡೆಸಿ ಸಂಪರ್ಕ ಕಲ್ಪಿಸಬೇಕಾಗಿದೆ. ಕೊಡುಗು ಜಿಲ್ಲೆಯ ವಿಶೇಷವೆಂದರೆ ಪರ್ಯಾಯ ಮಾರ್ಗಗಳಿಲ್ಲ. ಇರುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ಮೊದಲು ಸರಿಪಡಿಸಬೇಕಾಗಿದೆ. ಅದಕ್ಕಾಗಿ ಜಿಲ್ಲಾಡಳಿತ, ಸೇನಾಪಡೆ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದೆ.

WhatsApp Image 2018-08-18 at 1.20.07 PM

ಕೊಡಗಿನ ಜನರ ನೆರವಿಗೆ ಮಹಾಪೂರವೇ ಹರಿದು ಬಂದಿದೆ. ಕೊಡವ ಸಮಾಜ, ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರ, ಬಿಬಿಎಂಪಿ, ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಕೊಡಗಿನ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.  ಗುಡ್ಡ ಕುಸಿತ ಪ್ರಕರಣಗಳು ಸಾಮಾನ್ಯ ಎಂಬಂತಾಗಿದೆ. ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಕೊಡಗು-ಮಂಗಳೂರು ಮಾರ್ಗದಲ್ಲಿ ಗುಡ್ಡ ಕುಸಿತದಿಂದ ಸಂಚಾರ ಕಡಿತಗೊಂಡಿತ್ತು. ನಿನ್ನೆ ರಾತ್ರಿ ಜೋಡಪಲ್ಲಿ ಎಂಬಲ್ಲಿ ಮತ್ತೊಂದು ಗುಡ್ಡ ಕುಸಿದಿದೆ. ಕುಸಿದ ಗುಡ್ಡ ತೆರವುಗೊಳಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡುವುದು ಸವಾಲಾಗಿ ಪರಿಣಮಿಸಿದೆ.

Shobha--01

ಕಲ್ಲೂರು ಎಂಬ ಹಳ್ಳಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಜನವಸತಿ ಪ್ರದೇಶವೇ ಕೊಚ್ಚಿ ಹೋಗಿದೆ. ಇಲ್ಲಿ ಉಂಟಾದ ಹಾನಿಯ ಬಗ್ಗೆ ಈವರೆಗೆ ಮಾಹಿತಿಯೇ ಇಲ್ಲ. ಸೂಳ್ಯದಲ್ಲಿ 300 ಮಂದಿ ನಿರಾಶ್ರಿತರಾಗಿದ್ದಾರೆ. ಇವರಿಗೆಲ್ಲ ಅರಂತೋಡು ತೆಕ್ಕಿಲ ಸಮುದಾಯ ಭವನದಲ್ಲಿ ಆಶ್ರಯ ಒದಗಿಸಲಾಗಿದೆ. ಕಳೆದೆರಡು ದಿನಗಳಿಂದ ಗುಡ್ಡದ ಮೇಲೆ ಆಶ್ರಯ ಪಡೆದಿದ್ದ 200ಕ್ಕೂ ಹೆಚ್ಚು ಮಂದಿಯನ್ನು ಸೇನಾ ಪಡೆ ಕಾರ್ಯಾಚರಣೆ ನಡೆಸಿ ರಕ್ಷಿಸಿ ಗಂಜಿ ಕೇಂದ್ರಗಳಿಗೆ ರವಾನಿಸಿದೆ. ಸಾವಿರಾರು ಮಂದಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ.

ಕೊಡಗಿನಲ್ಲಿ ಉಂಟಾಗಿರುವ ಮಹಾ ಮಳೆ ಪಕ್ಕದ ಮೈಸೂರಿಗೂ ತಟ್ಟಿದೆ. ಕಾವೇರಿ, ಕಪಿಲಾ ನದಿಗಳು ಉಕ್ಕಿ ಹರಿಯುತ್ತಿವೆ. ಕೊಡಗಿನ ಮಳೆಯಿಂದ ಟಿ.ನರಸೀಪುರ ಬಳಿಯ ಹೆಮ್ಮಿಗೆ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ತಲಕಾಡು, ಟಿ.ನರಸೀಪುರ ಸಂಚಾರ ಬಂದ್ ಮಾಡಲಾಗಿದೆ.
ಕಬಿನಿ ಜಲಾಶಯದಿಂದ 80ಸಾವಿರ ಕ್ಯೂಸೆಕ್ ನೀರನ್ನು ನಿತ್ಯ ಬಿಡುತ್ತಿರುವುದರಿಂದ ಮಲ್ಲನಮೂಲೆ ಮಠದ ಬಳಿಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಇಲ್ಲಿನ ಬಸವೇಶ್ವರ ದೇವಾಲಯವು ಕೂಡ ಜಲಾವೃತಗೊಂಡಿದೆ.

Kodaghu--01

ಸಮಾರೋಪಾದಿಯಲ್ಲಿ ರಕ್ಷಣಾ ಕಾರ್ಯ :
ಬೆಂಗಳೂರು, ಆ.18- ಕೊಡಗು ಸೇರಿದಂತೆ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಎರಡೂವರೆ ಸಾವಿರ ನಾಗರಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಧಾರಾಳವಾಗಿ  ನೆರವು ನೀಡಲಿದ್ದು, 2ರಿಂದ ಎರಡೂವರೆ ಲಕ್ಷ ರೂ. ನೀಡಲು ಸೂಚಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ 50 ಜೆಸಿಬಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಮನಗರ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ಕಂದಾಯ ಇಲಾಖೆ ಅಧಿಕಾರಿಗಳನ್ನು ನೆರೆ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದೆ. ವೈದ್ಯರ ತಂಡಗಳನ್ನೂ ಕಳುಹಿಸಿ ಕೊಡಲಾಗಿದೆ ಎಂದರು.
ಮಕ್ಕಳ ಆಹಾರ, ಔಷಧಿ, ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಸೂಚಿಸಿರುವುದಾಗಿ ಹೇಳಿದ ಸಿಎಂ, ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಅನಾಹುತಕ್ಕೆ 153 ಮಂದಿ ಮೃತಪಟ್ಟಿದ್ದು, 11,427 ಮನೆಗಳು ಹಾನಿಗೀಡಾಗಿವೆ. 723 ಜಾನುವಾರುಗಳು ಮೃತಪಟ್ಟಿವೆ. ಕೊಡಗಿನಲ್ಲಿ ಇದುವರೆಗೂ 6 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 237ಕೋಟಿ ರೂ. ಹಣವಿದ್ದು, ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು. ಕೊಡಗಿನಲ್ಲಿ 30 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 2260 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಹಲವು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಅಡಿಕೆ, ಕಾಫಿ, ಕಾಳು ಮೆಣಸು ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ನಷ್ಟದ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಶಿವಮೊಗ್ಗ, ಹಾಸನ , ಮೈಸೂರು ಮತ್ತಿರರ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಕೊಡಗು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದ ಜನರನ್ನು ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆ ಹಾಕದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾರತೀಯ ಸೇನೆಯ 75 ಮಂದಿ, ಭಾರತೀಯ ಜಲಸೇನೆಯ (ನೇವಿ) 12 ಮಂದಿ, ಎನ್‍ಡಿಆರ್‍ಎಫ್‍ನ 31 ಮಂದಿ, ಅಗ್ನಿಶಾಮಕದಳ, ಎನ್‍ಸಿಸಿ, ನಾಗರಿಕ ಸೇನೆಯ 527 ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು. ರಕ್ಷಣಾ ಕಾರ್ಯಕ್ಕೆ ಬೋಟ್‍ಗಳನ್ನು ಬಳಸಲಾಗುತ್ತಿದೆ. ಸೇನೆಯ ಹೆಲಿಕಾಫ್ಟರ್ ಮೂಲಕ ಜನರನ್ನು ರಕ್ಷಿಸಲಾಗಿದ್ದು, ಆಹಾರ ಪೂರೈಕೆಯನ್ನು ಮಾಡಲಾಗುತ್ತಿದೆ. ಜೋಡಪಾಲದಲ್ಲಿ 200ರಿಂದ 300 ಎಕರೆ ಪ್ರದೇಶ ಕುಸಿತಕ್ಕೆ ಒಳಗಾಗಿದ್ದು, 347 ಮಂದಿಯನ್ನು ರಕ್ಷಿಸಲಾಗಿದೆ ಎಂದರು.

# ದೊಡ್ಡಮಟ್ಟದಲ್ಲಿ ಅನಾಹುತ:
ಕೊಡಗಿನಲ್ಲಿ ದೊಡ್ಡಮಟ್ಟದಲ್ಲಿ ಅನಾಹುತವಾಗಿದ್ದು, ತುರ್ತಾಗಿ ಅಗತ್ಯವಿರುವ ಅಡುಗೆ ಆನಿಲ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯನ್ನು ಆದ್ಯತೆ ಮೇರೆಗೆ ಪೂರೈಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಎಟಿಎಂಗಳಲ್ಲಿ ಹಣ ಪೂರೈಕೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕಡಿತವಾಗಿರುವ ವಿದ್ಯುತ್ ಸಂಪರ್ಕ, ದೂರಸಂಪರ್ಕಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿರುವುದಾಗಿ ತಿಳಿಸಿದ ಸಿಎಂ, ವಿದ್ಯುತ್ ಮಾರ್ಗ ಸರಿಪಡಿಸಲು ಇತರೆ ಜಿಲ್ಲೆಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಳ್ಳುವಂತೆ ಹೇಳಿದ್ದೇನೆ ಎಂದರು. ಸಚಿವರಾದ ಡಿ.ಸಿ.ತಮ್ಮಣ್ಣ, ಜಯಮಾಲಾ, ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin