ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramah

ನಂಜನಗೂಡು, ಆ.19- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲ್ಲೂಕಿನ ಮಲ್ಲನಮೂಲೆ ಮಠ, ನೂತನವಾಗಿ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹೆಜ್ಜಿಗೆ-ನಂಜನಗೂಡು ಸೇತುವೆ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿ ಪಾದಯಾತ್ರೆ ಮೂಲಕ ನಡೆದು ಬಂದ ಅವರು ತೋಪಿನ ಬೀದಿ, ಹಳ್ಳದ ಕೇರಿ, ಗಂಜಿ ಕೇಂದ್ರ, ತಗ್ಗು ಪ್ರದೇಶಗಳ ಪರಿಶೀಲನೆ ನಡೆಸಿದರು.

ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಪತ್ರಕರ್ತರ ಜೊತೆ ಮಾತನಾಡಿ, ಈಗಾಗಲೇ ಕಂದಾಯ ಮಂತ್ರಿಗಳು ಭೇಟಿ ನೀಡಿ ಎಲ್ಲವೂ ಪರಿಶೀಲಿಸಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ. ತಮಗೆ ಸರ್ಕಾರದಿಂದ ಎಲ್ಲಾ ರೀತಿಯ ಪರಿಹಾರ ನೀಡಲಾಗುವುದು. ತಗ್ಗು ಪ್ರದೇಶದಲ್ಲಿ ಮನೆಗಳಲ್ಲಿ ವಾಸಿಸುವ ಜನರಿಗೆ ಬೇರೆ ಕಡೆ ಸ್ಥಳ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ . ತುವೆಯಿಂದ ಯಾವುದೇ ಅಪಾಯವಿಲ್ಲ . ಈ ಸೇತುವೆ ನಿರ್ಮಾಣವಾಗದಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು ಎಂದರು.

ಇದೇ ಸಂದರ್ಭದಲ್ಲಿ ಸಂಸದ ಆರ್.ಧೃವನಾರಾಯಣ್, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ನಂಜುಂಡನ ಸನ್ನಿಧಿಗೆ ನುಗ್ಗಿದ ನೀರು:ಕಪಿಲಾ ನದಿ ಪಾತ್ರದ ಪ್ರದೇಶಗಳಲ್ಲಿ ಜಲಪ್ರಳಯ ಮುಂದುವರಿದಿದ್ದು, ನದಿಯಲ್ಲಿ ನೀರು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ನೆರೆ ಮತ್ತಷ್ಟು ತೀವ್ರಗೊಳ್ಳುವ ಭೀತಿ ಎದುರಾಗಿದೆ. ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 90 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದ್ದು, ಕಪಿಲಾ ನದಿಯಲ್ಲಿ 90 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಇದರಿಂದ ಪ್ರವಾಹ ಪರಿಸ್ಥಿತಿ ಬಿಗಡಾಯಿಸ ತೊಡಗಿದೆ.

ಮಲ್ಲನಮೂಲೆ ಮಠದ ಬಳಿ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಎರಡನೇ ಬಾರಿಗೆ ಪ್ರವಾಹಕ್ಕೆ ಸಿಲುಕಿದ್ದು. ನದಿಯ ನೀರು ಹೆದ್ದಾರಿ ದಾಟಿ ಪಕ್ಕದ ಜಮೀನು ಸೇರಿದಂತೆ ಹೆದ್ದಾರಿಯಲ್ಲಿ 4 ಅಡಿಯಷ್ಟು ನೀರು ಹರಿಯುತ್ತಿದೆ.

# ಸಂಚಾರ ವ್ಯತ್ಯಯ:
ಹೆದ್ದಾರಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಬಸವನಪುರ, ಹೆಜ್ಜಿಗೆ, ಕೆಂಪಿಸಿದ್ದನ ಹುಂಡಿ ಮಾರ್ಗವಾಗಿ ತಾಂಡ್ಯ ಹಾಗೂ ಕಡಕೊಳ ಕೈಗಾರಿಕಾ ಪ್ರದೇಶಗಳ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಒದಗಿಸಲಾಗಿದೆ. ಭಾರಿ ವಾಹನಗಳಿಗೆ ಹುಲ್ಲಹಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ವಾಹನ ದಟ್ಟಣೆಯಿಂದಾಗಿ ಬದಲಿ ಮಾರ್ಗದಲ್ಲೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಮಿಳುನಾಡು, ಕೇರಳ ಭಾಗದ ಪ್ರವಾಸಿಗರಿಗೆ ಬಂದ್ ಬಿಸಿ ತಟ್ಟಿದೆ.

# ದೇವಾಲಯಗಳು ಮುಳುಗಡೆ:
ತಾಲೂಕಿನ ಸಂಗಮ ಕ್ಷೇತ್ರದ ಸದ್ಗುರು ಮಹದೇವ ತಾತಾ ಸನ್ನಿಧಿ ದ್ವೀಪದಂತಾಗಿದೆ. ನಗರದ ರಾಘವೇಂದ್ರಸ್ವಾಮಿ , ಪಂಚ ಬೃಂದಾವನ ಅಯ್ಯಪ್ಪಸ್ವಾಮಿ, ದತ್ತಾತ್ರೇಯ ಗುಡಿ ಚಾಮುಂಡೇಶ್ವರಿ ದೇವಾಲಯಗಳು ಮುಳುಗಡೆಯಾಗಿವೆ. ಹಿಮ್ಮುಖವಾಗಿ ಹರಿದು ಬಂದಿರುವ ಪ್ರವಾಹದ ನೀರು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಭಕ್ತಿ ಮಾರ್ಗ, ಡಾರ್ಮೆಟರಿ, ಪಾರ್ಕಿಂಗ್ ಸ್ಥಳದಲ್ಲಿ ಸುತ್ತುವರೆದು ನಿಂತಿದೆ.

ಪ್ರವಾಹಕ್ಕೆ ಸಿಲುಕಿರುವ ಹಳ್ಳದಕೇರಿ ಸರಸ್ವತಿ ಕಾಲೋನಿ, ತೋಪಿನ ಬೀದಿ, ಹೆಜ್ಜಿಗೆ ಬೊಕ್ಕಹಳ್ಳಿ ಗ್ರಾಮಗಳ 100ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡು ಆತಂಕ ಸೃಷ್ಟಿಯಾಗಿದೆ. ಕೆಲ ಮನೆಗಳ ಗೋಡೆ ಕಸಿದು ಬೀಳುವ ಸಂಭವವಿದೆ. ಪ್ರವಾಹ ಸಂತ್ರಸ್ತರಿಗೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಗಿರಿಜಾ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಪ್ರತಿ ದಿನ 300 ಜನರಿಗೆ ದಾಸೋಹ ಭವನದಲ್ಲಿ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿದೆ.  ಬೊಕ್ಕಹಳ್ಳಿಯ ಶಾಲೆಯ ಗಂಜಿ ಕೇಂದ್ರದಲ್ಲಿ ಹಾಗೂ ಸರಸ್ವತಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ. ತುರ್ತು ಆರೋಗ್ಯ ಕೇಂದ್ರ ತೆರೆದು ವೈದ್ಯರನ್ನು ನಿಯೋಜಿಸಿ ಗ್ರಾಮಸ್ಥರಿಗೆ ನೆರವು ನೀಡಲಾಗುತ್ತಿದೆ.

Facebook Comments

Sri Raghav

Admin