ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಎಸ್‍ವೈ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyuurappa--01

ಮಡಿಕೇರಿ,ಆ.19- ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಭೇಟಿ ನೀಡಿ ಸಂಕಷ್ಟದಲ್ಲಿರುವ ಸಂತ್ರಸ್ತರ ಅಳಲನ್ನು ಆಲಿಸಿದರು. ಇಂದು ಬೆಳಗ್ಗೆ ಸಂಸದರಾದ ಶೋಭ ಕರಂದ್ಲಾಜೆ, ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುಬ್ರಹ್ಮಣಿ ಮತ್ತಿತರ ಸ್ಥಳೀಯ ಮುಖಂಡರ ಜೊತೆ ಯಡಿಯೂರಪ್ಪ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ಕೊಟ್ಟರು.

ಕುಶಾಲನಗರ, ಇಂದಿರಾ ಬಡಾವಣೆ, ಶ್ರೀಗಂಧಕೋಟಿ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದರು. ಕುಶಾಲನಗರದ ನಂತರ ವಿರಾಜಪೇಟೆ, ಶನಿವಾರಸಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ಯಡಿಯೂರಪ್ಪ , ಪ್ರವಾಹದಿಂದ ಪ್ರಾಣ ಕಳೆದುಕೊಂಡಿರುವ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಜಿಲ್ಲೆಯಲ್ಲಿ ಇಂದು ಕೂಡ ಅಲ್ಲಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆಲವು ಪ್ರದೇಶಗಳಿಗೆ ಅವರು ಭೇಟಿ ಕೊಡಲು ಸಾಧ್ಯವಾಗಲಿಲ್ಲ.

ಪರಿಹಾರ ಬಿಡುಗಡೆಗೆ ಒತ್ತಾಯ:
ತಮ್ಮ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ರಾಜ್ಯ ಸರ್ಕಾರ ನೀಡಿರುವ 100 ಕೋಟಿ ತುರ್ತು ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೂಡಲೇ ಹೆಚ್ಚಿನ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯಲ್ಲಿ ಊಹೆಗೂ ನಿಲುಕದ ಪ್ರವಾಹ ಉಂಟಾಗಿದೆ. ಅನೇಕರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಹಲವಾರು ಮಂದಿ ನಿರ್ವಸತಿಗರಾಗಿದ್ದಾರೆ. ರಸ್ತೆಗಳು ಹಾಳಾಗಿವೆ. ಬೆಳೆದು ನಿಂತ ಬೆಳೆ ಕೊಚ್ಚಿ ಹೋಗಿದೆ. ಸರ್ಕಾರ ಕೂಡಲೇ ಜನರ ಸಂಕಷ್ಟಕ್ಕೆ ಧಾವಿಸಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.

ಸರ್ಕಾರ ತೆಗೆದುಕೊಂಡಿರುವ ಪರಿಹಾರ ಕ್ರಮಗಳು ಏನೇನು ಸಾಲದು. ಅನೇಕ ಕಡೆ ಗಂಜಿ ಕೇಂದ್ರಗಳಲ್ಲಿ ಜನರು ಕುಡಿಯುವ ನೀರು, ಆಹಾರ ಇಲ್ಲದೇ ಪರದಾಡುತ್ತಿದ್ದಾರೆ. ಕನಿಷ್ಟ ಪಕ್ಷ ಅವರಿಗೆ ಬಟ್ಟೆ, ವೈದ್ಯಕೀಯ ನೆರವು, ಕುಡಿಯುವ ನೀರು, ಔಷಧಿ, ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.

ಕೇರಳ ಹಾಗೂ ಮಡಿಕೇರಿಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ನೋವಾಗಿದೆ. ಇಲ್ಲಿನ ಜನರ ದುಸ್ಥಿತಿ ಹೇಳತೀರದು. ಈ ನಡುವೆ ದಾನಿಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಎಲ್ಲರೂ ಒಟ್ಟಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ ಎಂದರು. ಮಳೆ ಪೀಡಿತ ಪ್ರದೇಶಗಳಿಂದ ಹಾನಿಗೊಳಗಾದ ಪ್ರದೇಶಗಳಿಗೆ ಹೆಚ್ಚಿನ ನೆರವು ದೊರಕಿಸಿಕೊಡಲು ಕೇಂದ್ರದೊಂದಿಗೆ ಮಾತನಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

Facebook Comments

Sri Raghav

Admin