ಕೊಡಗಿನ ಜನರ ಕೈಹಿಡಿದ ಕನ್ನಡಿಗರು, ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ನೆರವು
ಕೊಡಗು, ಆ.19- ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನಿರಾಶ್ರಿತರಾಗಿರುವ ಕೊಡಗಿನ ಜನರಿಗೆ ನೆರವಿನ ಮಹಾಪೂರ ಹರಿದುಬಂದಿದೆ. ಪರಿಹಾರ ಸಾಮಗ್ರಿಗಳನ್ನು ಹೊತ್ತ ಟೆಂಪೋ ಲಾರಿ ಸೇರಿದಂತೆ ವಿವಿಧ ವಾಹನಗಳು ಮಡಿಕೇರಿ, ವಿರಾಜಪೇಟೆ, ಕುಶಾಲನಗರಗಳಿಗೆ ತಲುಪಿದ್ದು, ಗಂಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಸುಮಾರು 34 ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾವಿರಾರು ಜನ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯವಿರುವ ನೀರಿನ ಬಾಟಲ್, ಹಾಸಿಗೆ, ಹೊದಿಕೆ, ಔಷಧಿ, ಆಹಾರ ಪದಾರ್ಥಗಳನ್ನು ವಿವಿಧೆಡೆಯಿಂದ ಮಾಧ್ಯಮಗಳು, ಸ್ವಯಂ ಸೇವಾ ಸಂಸ್ಥೆಗಳು , ವಿವಿಧ ಸಂಘಟನೆಗಳವರು ಸಂಗ್ರಹಿಸಿದ್ದು, ಅವುಗಳನ್ನು ಸಂತ್ರಸ್ತರಿಗೆ ತಲುಪಿಸಿದ್ದಾರೆ.
ಕೊಡಗಿನಲ್ಲಿ ಮಳೆ ಬಿದ್ದು ಸಂತ್ರಸ್ತರ ನೆರವಿಗೆ ಮೊರೆಯಿಡುತ್ತಿದ್ದಂತೆ ಜಾತಿಭೇದ, ಪಕ್ಷಭೇದ, ವರ್ಣಭೇದ ಎಲ್ಲವನ್ನೂ ಮರೆತ ಜನ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಿದರು. ತಾತ್ಕಾಲಿಕವಾಗಿ ಬೇಕಾದ ವಸ್ತುಗಳನ್ನು ನೀಡಿದರು. ಅವುಗಳನ್ನು ತಲುಪಿಸುವುದೇ ಒಂದು ಸವಾಲಾಗಿದೆ. ಕೊಡವ ಸಮಾಜದವರು ಸ್ಥಳೀಯ ಜಿಲ್ಲಾಡಳಿತ, ಪೊ ಲೀಸರು, ಸಂಘ-ಸಂಸ್ಥೆಗಳವರು ಸಂತ್ರಸ್ತರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲು ಮುಂದಾಗಿದ್ದಾರೆ.
ನಿನ್ನೆಯಿಂದ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ವಿವಿಧ ವಸ್ತುಗಳನ್ನು ವಿತರಿಸಲಾಗುತ್ತಿದೆ. ವಿವಿಧ ಪರಿಹಾರ ಸಾಮಗ್ರಿಗಳನ್ನು ಹೊತ್ತ ಲಾರಿ, ಟೆಂಪೋ , ಟ್ಯಾಕ್ಸಿಗಳು ಮಡಿಕೇರಿಯತ್ತ ಸಾಗಿದ್ದವು. ಅವುಗಳನ್ನೆಲ್ಲ ಸ್ವೀಕರಿಸಲು ಹಲವು ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿಂದ ಗಂಜಿಕೇಂದ್ರಗಳಿಗೆ ಕೊಂಡೊಯ್ದು ವ್ಯವಸ್ಥಿತವಾಗಿ ವಿತರಿಸಲಾಗುತ್ತಿದೆ. ಇದಲ್ಲದೆ, ಬಿಬಿಎಂಪಿ ಸದಸ್ಯರ ಒಂದು ತಿಂಗಳ ವೇತನ ಮತ್ತು ನೌಕರರು ಒಂದು ದಿನದ ವೇತನವನ್ನು ಹಾಗೂ ನಾಳೆ ಎರಡು ಲಾರಿಯಷ್ಟು ಅಗತ್ಯ ಸಾಮಗ್ರಿಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗುತ್ತಿದೆ.
ಇದೇ ರೀತಿ ವಿವಿಧ ಸಂಘ-ಸಂಸ್ಥೆಗಳವರು ಕೂಡ ವಿವಿಧ ಪರಿಹಾರ ಸಾಮಗ್ರಿಗಳನ್ನು ಕೂಡ ಕೊಡಗಿನಲ್ಲಿ ಸಂತ್ರಸ್ತರಾದವರಿಗೆ ತಲುಪಿಸಲಿದ್ದಾರೆ. ಮೈಸೂರಿನ ಸಿಎಫ್ಟಿಆರ್ಐ ಆಹಾರ ಪದಾರ್ಥಗಳನ್ನು ತಯಾರಿಸಿ ಕಳುಹಿಸಿಕೊಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ವೈದ್ಯಕೀಯ ಇಲಾಖೆ ಸಿಬ್ಬಂದಿಯ ಒಂದು ದಿನದ ವೇತನವನ್ನು ಸಂತ್ರಸ್ತರ ನೆರವಿಗೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಲ್ಲಿ ರಕ್ಷಣಾ ಕಾರ್ಯಕ್ಕಾಗಿ 35 ಜೆಸಿಬಿಗಳನ್ನು ಕಳುಹಿಸಿಕೊಟ್ಟಿದ್ದಾರೆ. 20 ವೈದ್ಯರ ತಂಡವನ್ನೂ ಕಳುಹಿಸಿದ್ದಾರೆ. ಮಳೆ ತಗ್ಗಿದ ಮೇಲೆ ಸಂಭಾವ್ಯ ಅನಾರೋಗ್ಯ ಪರಿಸ್ಥಿತಿ ನಿಭಾಯಿಸಲು ಅಗತ್ಯ ಔಷಧೋಪಚಾರ ಮಾಡಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ತಾತ್ಕಾಲಿಕ ವೈದ್ಯಕೀಯ ಟೆಂಟ್ಗಳನ್ನೂ ನಿರ್ಮಾಣ ಮಾಡಲು ಸೂಚನೆ ನೀಡಿರುವ ಅವರು, ಆರೋಗ್ಯ ಶಿಬಿರಗಳನ್ನೂ ನಡೆಸಲು ನಿರ್ದೇಶಿಸಿದ್ದಾರೆ.
ಇತ್ತ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಗಂಜಿಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಅಗತ್ಯ ಊಟೋಪಚಾರದ ಬಗ್ಗೆ ಕ್ರಮ ವಹಿಸಿದ್ದಾರೆ. ಹಾಲು, ಬೇಳೆ ಇನ್ನಿತರ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಸಚಿವರಾದ ಸಾ.ರಾ.ಮಹೇಶ್, ಆರ್.ವಿ.ದೇಶಪಾಂಡೆ, ಸ್ಥಳೀಯ ಜನಪ್ರತಿನಿಧಿಗಳು ಮೊಕ್ಕಾಂ ಹೂಡಿ ಕೊಡಗಿನ ಜನರಿಗೆ ನೆರವಾಗುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ವೈಮಾನಿಕ ಸಮೀಕ್ಷೆ ನಡೆಸಿ ಖುದ್ದು ಪರಿಸ್ಥಿತಿ ಅವಲೋಕನ ನಡೆಸಿ ಜನರು ಯಾವುದೇ ರೀತಿಯ ಆತಂಕ ಪಡುವುದು ಬೇಡ. ಎಲ್ಲ ಆಸ್ತಿ ನಷ್ಟ ಪರಿಹಾರ, ಮನೆಗಳ ಪುನರ್ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಪ್ರತಿಪಕ್ಷ ಬಿಜೆಪಿ ನಾಯಕರಾದ ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮುಂತಾದವರು ಕೂಡ ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರಲ್ಲದೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಒಟ್ಟಾರೆ ಕೊಡಗಿನ ಜನರ ನೆರವಿಗೆ ಎಲ್ಲರೂ ಕೈ ಜೋಡಿಸಿದ್ದಾರೆ.