ಸಿಎಂಗೆ ಕರೆಮಾಡಿ ಕೊಡಗು ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Phoine--01
ನವದೆಹಲಿ. ಆ. 19 ; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಕೊಡಗು ಜಿಲ್ಲೆಯ ಸ್ಥಿತಿ ಗತಿ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದು ಕೇಂದ್ರ ಸರ್ಕಾರವು ರಕ್ಷಣೆಗೆ ಹಾಗೂ ಪರಿಹಾರ ಕಾರ್ಯಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.  ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳು , ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಸೇನಾ ಸಿಬ್ಬಂದಿ, ಎನ್.ಡಿ.ಆರ್.ಎಫ್. ಮತ್ತು ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ಯಲ್ಲಿ ತೊಡಗಿದ್ದು 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

# ಕೇರಳಕ್ಕೆ ಬಂದರೂ ಕೊಡಗಿನ ಕಡೆ ತಿರುಗಿ ನೋಡದ ಪ್ರಧಾನಿ ಮೋದಿ ನಡೆ ಬಗ್ಗೆ ಆಕ್ರೋಶ : 
ನರೇಂದ್ರ ಮೋದಿ ಅವರು ಇಡೀ ದೇಶಕ್ಕೇ ಪ್ರಧಾನಿ. ಕೇರಳದಲ್ಲಿ ಜಲಪ್ರಳಯ ಆಗಿರುವಂತೆಯೇ ನಮ್ಮಲ್ಲೂ ಆಗಿದೆ. ಆದರೆ, ಪ್ರಧಾನಿಯವರು ಕೇರಳದಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಿ ನಮ್ಮ ಜಿಲ್ಲೆಯ ಬಗ್ಗೆ ಚಕಾರವೆತ್ತಿಲ್ಲ ಎಂದು ಕೊಡಗಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್‍ಸಿಂಹ ನೇತೃತ್ವದ ಬಿಜೆಪಿ ತಂಡ ನೆರೆ ಪೀಡಿತ ಸಂತ್ರಸ್ತರನ್ನು ಭೇಟಿ ಮಡಿದ ವೇಳೆ ಸ್ಥಳೀಯರು ಮೋದಿ ಅವರ ನಡೆ ಬಗ್ಗೆ ಕಿಡಿಕಾರಿದ್ದಾರೆ.  ನಾವು ಕೂಡ ಭಾರತದಲ್ಲೇ ಇರುವುದು. ಕೊಡಗಿನಲ್ಲೂ ಸಾಕಷ್ಟು ಹಾನಿಯಾಗಿದೆ, ಸಾವು-ನೋವು ಸಂಭವಿಸಿದೆ. ಮಳೆ ಮುಂದುವರಿದಿದ್ದು ಗುಡ್ಡ ಕುಸಿಯುತ್ತಲೇ ಇದೆ. ಆತಂಕದಲ್ಲಿ ಕ್ಷಣ ಕ್ಷಣವನ್ನೂ ದೂಡುತ್ತಿದ್ದೇವೆ.ಆದರೆ, ಸಾಂತ್ವನ ನೀಡಬೇಕಾದ ಪ್ರಧಾನಿ ಮೋದಿ ಅವರು ಕೇರಳದಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಿ ನಮ್ಮ ಜಿಲ್ಲೆ ಬಗ್ಗೆ ಮಾತೇ ಆಡಿಲ್ಲ. ಅವರ ಈ ನಡೆ ಸರಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

# ಇಂದು ಕೂಡ ಕೊಡಗಿನಲ್ಲಿ ಸಿಎಂ ವೈಮಾನಿಕ ಸಮೀಕ್ಷೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಮೈಸೂರಿನಿಂದ ಹೊರಟು ಕೊಡಗು ಜಿಲ್ಲೆಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಿನ್ನೆ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ವೀಕ್ಷಿಸದ ಸ್ಥಳಗಳಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸುವರು. ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ ಪಿರಿಯಾಪಟ್ಟಣ ಹೆಲಿಪ್ಯಾಡ್‍ನಲ್ಲಿ ಇಳಿದು ಕೊಡಗು ಜಿಲ್ಲಾ ಪರಿಹಾರ ಕಾಮಗಾರಿಗಳನ್ನು ಪುನರ್ ಪರಿಶೀಲನೆ ನಡೆಸುವರು.

ಮೈಸೂರಿನಲ್ಲಿ ಮೊಕ್ಕಾಂ ಹೂಡಿರುವ ಮುಖ್ಯಮಂತ್ರಿಗಳು ಕೊಡಗು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ನಿನ್ನೆ 317 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಇಂದು ಮಕ್ಕಂದೂರು ಸುತ್ತಮುತ್ತಲ ಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಸೇನಾಪಡೆ ಹಾಗೂ ಎನ್‍ಡಿಆರ್‍ಎಫ್ ತಂಡ ಕಾರ್ಯೋನ್ಮುಖವಾಗಿದೆ. 31 ಗಂಜಿಕೇಂದ್ರಗಳಲ್ಲಿ ಅಗತ್ಯವಾದ ಆಹಾರ ವ್ಯವಸ್ಥೆ ಮಾಡಲಾಗಿದೆ. ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಹಾಲು, ಅಕ್ಕಿ, ಬೇಳೆ, ಇತರೆ ಧಾನ್ಯಗಳನ್ನು ಪೂರೈಸಲಾಗಿದ್ದು, ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಆವರು ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

Facebook Comments

Sri Raghav

Admin