ಕೊಡಗಿಗೆ ಪ್ರಧಾನಿ ಕೂಡಲೇ ಭೇಟಿ ನೀಡಬೇಕೆಂದು ವಾಟಾಳ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Kodagu-Vatal-Nagaraj
ಬೆಂಗಳೂರು,ಆ.19- ಕೊಡಗಿನಲ್ಲಿ ಸಂಭವಿಸಿರುವ ಮಳೆಯ ದುರಂತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಭೇಟಿ ನೀಡಬೇಕು. ಕೇಂದ್ರದಿಂದ 5 ಸಾವಿರ ಕೋಟಿ ರೂ. ಪರಿಹಾರ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಕೊಡಗಿನಲ್ಲಿ ಮಳೆಹಾನಿಯಿಂದ ಸಂಭವಿಸಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ ಭೇಟಿ ನೀಡಿ, ಕೊಡಗಿಗೆ ಭೇಟಿ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಕೂಡಲೇ ಕೊಡಗಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿ ಪರಿಹಾರ ನೀಡಬೇಕು.

ಇದಕ್ಕಾಗಿ ಆಗ್ರಹಿಸಿ ನಾಳೆ ಬೆಳಗ್ಗೆ 11 ಗಂಟೆಗೆ ರಾಜಭವನದ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ನಿರಂತರ ಮಳೆಯಿಂದ ಕೊಡಗು ತತ್ತರವಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಹತ್ತಾರು ಜನ ಸಾವನ್ನಪ್ಪಿದ್ದಾರೆ. ಜನ-ಜಾನುವಾರುಗಳು ಕಣ್ಮರೆಯಾಗಿವೆ. ಪರಿಹಾರ ಕಾರ್ಯಕ್ರಮ ಕೈಗೊಳ್ಳಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಸರ್ಕಾರ ಕೂಡಲೇ ಸರ್ವಪಕ್ಷ ಸಮಿತಿ ರಚಿಸಿ ನೆರವಿಗೆ ದಾವಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರವು ಕೂಡ ರಾಜ್ಯದ ಪ್ರಕೃತಿ ವಿಕೋಪದ ಬಗ್ಗೆ ಗಮನ ಹರಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು. ಶತಮಾನದಲ್ಲಿ ಕಂಡರಿಯದ ಮಳೆ ಮಡಿಕೇರಿಯಲ್ಲಿ ಬಂದು ಗುಡ್ಡಕುಸಿದು ರಸ್ತೆ ಸಂಪರ್ಕ, ಸೇತುವೆಗಳು ಬಿದ್ದು ಜನರ ಗೋಳು ಹೇಳತೀರದಾಗಿದೆ. 10 ಸಾವಿರಕ್ಕೂ ಹೆಚ್ಚು ಜನ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯಾದ್ಯಂತ ಜನ ನೆರವಿಗೆ ದಾವಿಸಿದ್ದಾರೆ. ಕೊಡಗನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ನೆರವು ನೀಡಬೇಕು ಎಂದು ಒತ್ತಾಯಿಸಿದರು.

Facebook Comments

Sri Raghav

Admin