ಪ್ರಧಾನಿ ಮೋದಿ ರಾಜಕೀಯ ದ್ವೇಷ ಸಾಧಿಸಿದ್ದಾರೆ : ಡಿ.ಕೆ.ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

D-K-Suresh--01

ಬೆಂಗಳೂರು, ಆ.20-ಕೇರಳದಲ್ಲಿನ ನೆರೆಯಿಂದಾಗಿರುವ ಅನಾಹುತಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ನಿರ್ಲಕ್ಷಿಸುವ ಮೂಲಕ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರ ಈ ವರ್ತನೆಯಿಂದ ಕೊಡಗಿನ ವೀರ ಯೋಧರ ಕುಟುಂಬಗಳಿಗೆ ಅವಮಾನ ಮಾಡಿ ದಂತಾ ಗಿದೆ. ಕಳೆದ 100 ವರ್ಷಗಳಿಂದ ಕಂಡರಿಯದ ಮಳೆ ಅನಾಹುತಗಳು ಈ ವರ್ಷ ಸಂಭವಿಸಿದೆ. ಬಹಳಷ್ಟು ಮನೆಗಳು ಕೊಚ್ಚಿ ಹೋಗಿದೆ, ರಸ್ತೆಗಳು ಹಾಳಾಗಿವೆ. ಕೋಟ್ಯಂತರ ರೂ.ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಪ್ರಾಣ ಹಾನಿಯೂ ಸಂಭವಿಸಿದೆ.

ಜನಜೀವನ ಬೀದಿಗೆ ಬಿದ್ದಿದೆ. ಪ್ರಧಾನಿ ಅವರು ಈ ಬಗ್ಗೆ ಗಮನಹರಿಸದೆ ಕುಂಟು ನೆಪ ಹೇಳುತ್ತಿದ್ದಾರೆ. ಮಾಧ್ಯಮಗಳು ಮಳೆ ಅನಾಹುತದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಬಿತ್ತರಿಸುತ್ತಿವೆ. ಅದಕ್ಕಿಂತ ಮಾಹಿತಿ ಪ್ರಧಾನಿಗೆ ಇನ್ಯಾವುದು ಬೇಕು. ಸರ್ಕಾರ ಮನವಿ ಸಲ್ಲಿಸಿಲ್ಲ ಎಂಬ ಕುಂಟು ನೆಪ ಹೇಳಿ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸದಿರುವುದು ಮಲತಾಯಿ ಧೋರಣೆ ಎಂದರು.

ಕೇರಳದಲ್ಲಿ ಸಮೀಕ್ಷೆ ನಡೆಸಿದ ಪ್ರಧಾನಿ ಅವರು ಒಮ್ಮೆ ಕರ್ನಾಟಕವನ್ನು ವೀಕ್ಷಿಸಬಹುದಿತ್ತು. ಅಂತಹ ಔದಾರ್ಯ ತೋರಿಸದೆ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ. ಕೊಡಗಿನಲ್ಲಿ ಅತಿ ಹೆಚ್ಚು ಸೈನಿಕರ ಕುಟುಂಬಗಳಿವೆ. ದೇಶ ಕಾಯುವ ಯೋಧರಿಗೆ ಅವರ ಕುಟುಂಬ ರಕ್ಷಣೆ ಬಗ್ಗೆ ಆತಂಕವಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಪುನರ್ವಸತಿ ಕೆಲಸ ಕೈಗೊಂಡು ಗಡಿಯಲ್ಲಿರುವ ಯೋಧರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿತ್ತು. ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೇಂದ್ರದಿಂದ ಒಂದು ನಯಾಪೈಸೆ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಎನ್‍ಡಿಆರ್‍ಎಫ್ ತಂಡವನ್ನು ಕಳುಹಿಸಿದೆ. ಆದರೆ ಇದು ಏನೇನಕ್ಕೂ ಸಾಲದು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು. ಎಚ್.ಡಿ.ರೇವಣ್ಣ ಅವರು ನೆರೆ ಸಂತ್ರಸ್ಥರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿಲ್ಲ. ಅತ್ಯಂತ ಹಿರಿಯರಾದ ಅವರಿಗೆ ಹೇಗೆ ವರ್ತಿಸಬೇಕೆಂದು ಗೊತ್ತಿದೆ. ತಳ್ಳಾಟ-ನೂಕಾಟದಲ್ಲಿ ಏನೋ ಹೆಚ್ಚು-ಕಡಿಮೆಯಾಗಿದೆ ಎಂದರು.

ನೆರೆಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ಈಗಾಗಲೇ ನಾಲ್ಕು ತಂಡಗಳನ್ನು ಕಳುಹಿಸಲಾಗಿದೆ. ಮಳೆ ನಿಂತು ಪರಿಸ್ಥಿತಿ ಹತೋಟಿಗೆ ಬಂದ ನಂತರ ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ಪುನರ್ವಸತಿ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

Facebook Comments

Sri Raghav

Admin