ಇವರ ಕೆಲಸ ಹಗಲಲ್ಲಿ ಸ್ಟವ್ ರಿಪೇರಿ ಮಾಡೋದು, ರಾತ್ರಿ ದೇವಸ್ಥಾನ ಹುಂಡಿ ಪರಾರಿ ಮಾಡೋದು..!

ಈ ಸುದ್ದಿಯನ್ನು ಶೇರ್ ಮಾಡಿ

Arrested

ಬೆಂಗಳೂರು, ಆ.21- ಹಗಲು ವೇಳೆ ಸ್ಟವ್ ರಿಪೇರಿ ಮಾಡುವುದಾಗಿ ಹೇಳಿಕೊಂಡು ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ ಭಕ್ತರ ಸೋಗಿನಲ್ಲಿ ದೇವಸ್ಥಾನಗಳಿಗೆ ಹೋಗಿ ಹುಂಡಿಯಲ್ಲಿ ಹಣ ಇದೆಯೇ, ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಂಡು ರಾತ್ರಿ ವೇಳೆ ಹುಂಡಿ ದೋಚುತ್ತಿದ್ದ ಮೈಸೂರು ಮೂಲದ ನಾಲ್ವರನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕುಮಾರ (23), ಮಂಜ (24), ಕೃಷ್ಣ (40) ಮತ್ತು ವಿಜಯ್‍ಕುಮಾರ್ (21) ಬಂಧಿತ ಆರೋಪಿಗಳು.

ಇತ್ತೀಚಿನ ದಿನಗಳಲ್ಲಿ ನಗರದ ವಿವಿಧ ವ್ಯಾಪ್ತಿಗಳಲ್ಲಿ ದೇವಸ್ಥಾನದ ಬೀಗ ಮುರಿದು ಕನ್ನಗಳವು ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಆರೋಪಿಗಳ ಪತ್ತೆಗಾಗಿ ಮೈಕೋ ಲೇಔಟ್ ಪೊಲೀಸರು ತಂಡವನ್ನು ರಚಿಸಿದ್ದರು.  ಈ ತಂಡ ಕಾರ್ಯಾಚರಣೆ ನಡೆಸಿ ಮೈಸೂರು ಮೂಲದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 55 ಗ್ರಾಂ ತೂಕದ ಒಡವೆಗಳು, 1 ಕೆಜಿ 314 ಗ್ರಾಂ ಬೆಳ್ಳಿ ಆಭರಣಗಳು, 72 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 17 ದೇವಸ್ಥಾನದ ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ಅಲೆಮಾರಿಗಳಾಗಿದ್ದು, ಬಯಲು ಪ್ರದೇಶದಲ್ಲಿ ಟೆಂಟ್‍ಗಳನ್ನು ಹಾಕಿಕೊಂಡು ವಾಸಿಸುತ್ತಾರೆ.

ಇವರು ಜೀವನೋಪಾಯಕ್ಕಾಗಿ ಹಗಲು ವೇಳೆಯಲ್ಲಿ ಸ್ಟವ್ ರಿಪೇರಿ ಮಾಡುತ್ತೇವೆಂದು ಹೇಳಿಕೊಂಡು ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿಕೊಂಡು ವಿವಿಧ ದೇವಸ್ಥಾನಗಳಿಗೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿ ಹಣ ಹಾಕಿ ಅದು ತುಂಬಿದೆಯೇ ಅಥವಾ ಖಾಲಿ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ತದನಂತರ ರಾತ್ರಿ ವೇಳೆ ದೇವಸ್ಥಾನದ ಬೀಗ ಒಡೆದು ದೇವರ ಮೇಲಿನ ಆಭರಣಗಳು, ಹುಂಡಿಯ ಹಣ ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಆಗ್ನೇಯ ವಿಭಾಗದ ಮೈಕೋ ಲೇಔಟ್ ಠಾಣೆಯ ಮೂರು ದೇವಸ್ಥಾನ ಕನ್ನಗಳವು ಪ್ರಕರಣ, ಎಲೆಕ್ಟ್ರಾನಿಕ್ ಸಿಟಿ ನಾಲ್ಕು, ಬೊಮ್ಮನಹಳ್ಳಿ ಎರಡು, ಕೆಎಸ್ ಲೇಔಟ್ ಎರಡು, ತಿಲಕ್‍ನಗರ, ಜಯನಗರ, ಜೆಪಿ ನಗರ, ಸುಬ್ರಹ್ಮಣ್ಯನಗರ ವ್ಯಾಪ್ತಿಯ ತಲಾ ಒಂದು ದೇವಸ್ಥಾನ ಕನ್ನಗಳವು ಪ್ರಕರಣಗಳು ಹಾಗೂ ತುಮಕೂರು ಜಿಲ್ಲೆಯ ಚೇಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಠಾಣೆ ವ್ಯಾಪ್ತಿಯ ಒಂದು ದೇವಸ್ಥಾನ ಕನ್ನಗಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

Facebook Comments

Sri Raghav

Admin