ಸನ್ನಿಹಿತವಾಯಿತೇ ಸಾರ್ವಜನಿಕ ಗ್ರಂಥಾಲಯಗಳಿಗೆ ಬೀಗ ಬೀಳುವ ಕಾಲ..?!

ಈ ಸುದ್ದಿಯನ್ನು ಶೇರ್ ಮಾಡಿ

libraryಬಿ.ಎಸ್.ರಾಮಚಂದ್ರ

ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಆತಂಕ ಎದುರಾಗುತ್ತಿರುವ ಸಂದರ್ಭದಲ್ಲಿಯೇ ಜ್ಞಾನದೇಗುಲವೆಂದೇ ಪ್ರಸಿದ್ಧಿಯಾಗಿರುವ ಗ್ರಂಥಾಲಯಕ್ಕೂ ಬೀಗ ಜಡಿಯುವ ಸಿದ್ಧತೆ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಂಥಾಲಯಗಳಿಗೆ ಅದರದ್ದೇ ಆದ ಪವಿತ್ರ ಸ್ಥಾನವಿದೆ. ಅನೇಕ ಮಂದಿ ಇದರ ಪ್ರಯೋಜನ ಪಡೆದೇ ಉನ್ನತ ಹುದ್ದೆಯಲ್ಲಿದ್ದಾರೆ.  ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರೆಲ್ಲರಿಗೂ ಅಚ್ಚುಮೆಚ್ಚಿನ ಜ್ಞಾನವರ್ಧನೆಯ ಕೇಂದ್ರವಾಗಿದ್ದ ಗ್ರಂಥಾಲಯಗಳು ಈಗ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನಲುಗುತ್ತಿವೆ.

ಅಧಿಕಾರಿಗಳ ಜಾಣ ಮೌನ ಹಾಗೂ ಅಸಡ್ಡೆಯಿಂದ ಈ ಜ್ಞಾನಕೇಂದ್ರಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಇತ್ತ ರಾಜ್ಯ ಸರ್ಕಾರವೂ ಕೂಡ ಇದರತ್ತ ಚಿತ್ತ ಹರಿಸಿಲ್ಲ. ಪ್ರತಿ ವರ್ಷ ಬಜೆಟ್‍ನಲ್ಲಿ ಅನುದಾನ ಬಿಡುಗಡೆಯಾದರೂ ಅದನ್ನು ಸದ್ಬಳಕೆ ಮಾಡಿಕೊಂಡು ಜ್ಞಾನ ಪಸರಿಸಲು ಹಲವಾರು ಅವಕಾಶಗಳಿದ್ದರೂ ಅಧಿಕಾರಿಗಳು ಕೈಚೆಲ್ಲಿರುವುದು ದುರದೃಷ್ಟಕರವೆಂದೇ ಹೇಳಬೇಕಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕವಾಗಿ ಇರುವ ಗ್ರಂಥಾಲಯ ಈಗ ನಿಷ್ಪ್ರಯೋಜಕವಾದರೆ ಮುಂದಿನ ಪೀಳಿಗೆಗೆ ಇತಿಹಾಸ ಅಥವಾ ಪ್ರಚಲಿತ ವಿದ್ಯಮಾನಗಳನ್ನು ಅರಿಯುವುದು ಕಷ್ಟವಾಗಬಹುದು.  ಇಂದಿನ ಆಧುನಿಕ ತಂತ್ರಜ್ಞಾನ ಬಳಸುತ್ತಿರುವ ಸಂದರ್ಭದಲ್ಲೂ ದಾಖಲೆಗಳಿಗೆ ಅಗತ್ಯವಾದ ವಸ್ತುಗಳು ನಿಖರವಾಗಿ ಸಿಗುವುದು ಕೂಡ ಇದೇ ಗ್ರಂಥಾಲಯಗಳಲ್ಲಿ ಎಂಬುದನ್ನು ಜವಾಬ್ದಾರಿ ಇರುವವರೇ ಮರೆತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು, ಉದ್ಯೋಗವಕಾಶಗಳ ಬಗ್ಗೆ ನಿರುದ್ಯೋಗಿಗಳು ಹಾಗೂ ಕಲಿಕೆಗಾಗಿ ವಿದ್ಯಾರ್ಥಿಗಳಿಗೆ ಈಗ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

lib-n-2

ಪ್ರಸ್ತುತ ಸನ್ನಿವೇಶ:
ಸಿಬ್ಬಂದಿಗಳ ಕೊರತೆ ಈಗ ಪ್ರಮುಖವಾಗಿ ಕಾಡುತ್ತಿದೆ. ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವ ಅಗತ್ಯತೆ ಹೆಚ್ಚಾಗಿದೆ. ಇದಲ್ಲದೆ, ಸ್ವಚ್ಛತೆಗಾಗಿ ಸಿಬ್ಬಂದಿಗಳ ನೇಮಕವು ಕೂಡ ಆಗಬೇಕಿದೆ. ಆದರೆ, ಈಗಿರುವ ಪರಿಸ್ಥಿತಿ ನೋಡಿದರೆ ಗ್ರಂಥಾಲಯಗಳು ವಾರಕ್ಕೆ ಎರಡು ದಿನ ತೆರೆದರೆ ಅದೇ ದೊಡ್ಡದು ಎನ್ನುವಂತಹ ಸ್ಥಿತಿ ಇದೆ. ಇದಲ್ಲದೆ ಕೆಲವು ಕಡೆ ಬೆಳಕಿನ ವ್ಯವಸ್ಥೆ, ಸ್ವಚ್ಛತೆಯ ಕೊರತೆಯೂ ಕೂಡ ಎದ್ದು ಕಾಣುತ್ತಿದೆ. ಇದಲ್ಲದೆ ಸ್ವಂತ ಕಟ್ಟಡವಿಲ್ಲದಿರುವುದೂ ಕೂಡ ಪರಿಸ್ಥಿತಿಯನ್ನು ಶೋಚನೀಯವಾಗಿಸಿದೆ.

lib-n-3

ಮಾಹಿತಿಯ ಪ್ರಕಾರ ರಾಜ್ಯಾದ್ಯಂತ 6024 ಮೇಲ್ವಿಚಾರಕರು ಮತ್ತು 31 ಮಂದಿ ತಾತ್ಕಾಲಿಕ ನೌಕರರಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ 2500ರೂ.ಇದ್ದ ಮಾಸಿಕ ವೇತನವನ್ನು 5ಸಾವಿರ ರೂ.ಗೆ ಹೆಚ್ಚಳ ಮಾಡಲಾಯಿತು. ಆದರೂ ಇದರಿಂದ ಜೀವನ ನಿರ್ವಹಣೆ ಅಸಾಧ್ಯ ಎಂದು ಕೆಲವರು ಗ್ರಂಥಾಲಯ ಬಾಗಿಲು ತೆರೆಯುವುದನ್ನೇ ಅಪರೂಪವೆಂಬ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ.

lib-n-1

ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ಮೊಟ್ಟ ಮೊದಲ ಬಾರಿಗೆ 1965ರಲ್ಲಿ ಗ್ರಂಥಾಲಯ ವ್ಯವಸ್ಥೆಯನ್ನು ಜಾರಿಗೆ ತಂದು ಕಾಯ್ದೆಯನ್ನು ಜಾರಿಗೊಳಿಸಿತ್ತು. ಗ್ರಂಥಾಲಯ ಕರವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಗ್ರಾಪಂ, ಪಪಂ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಿಗೆ ವಹಿಸಲಾಗಿತ್ತು. ಆದರೆ, ವಿಪರ್ಯಾಸವೆಂಬಂತೆ ಅದೆಷ್ಟೋ ಕಡೆ ಕರವನ್ನು ಸಂಗ್ರಹಿಸದೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿದಿದ್ದರೂ ಕಣ್ಣು ಕಾಣುತ್ತಿಲ್ಲ. ಕಿವಿಯೂ ಕೇಳುತ್ತಿಲ್ಲ ಎಂಬ ಜಾಣ ನಡೆಯನ್ನು ಅನುಸರಿಸುತ್ತಿದ್ದಾರೆ.

Facebook Comments

Sri Raghav

Admin