ದೇವರ ಸ್ವಂತ ನಾಡು ಕೇರಳಕ್ಕೀಗ ಚೇತರಿಸಿಕೊಳ್ಳುವುದೇ ದೊಡ್ಡ ಸವಾಲು..!

ಈ ಸುದ್ದಿಯನ್ನು ಶೇರ್ ಮಾಡಿ

Kerala--01

ತಿರುವನಂತಪುರಂ (ಪಿಟಿಐ), ಆ.21-ಶತಮಾನದಲ್ಲೇ ಕಂಡು ಕೇಳರಿಯದ ಮಹಾಮಳೆ, ಭೀಕರ ಪ್ರವಾಹ ಹಾಗೂ ವಿನಾಶಕಾರಿ ಭೂಕುಸಿತದಿಂದ ನಲುಗಿರುವ ಕೇರಳದಲ್ಲಿ ವರುಣನ ರೌದ್ರಾವತಾರ ಕಡಿಮೆಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗಿದೆ.  ಜಲಪ್ರಳಯದಿಂದ ತತ್ತರಿಸಿರುವ ಕೇರಳಗೆ ಈಗ ಚೇತರಿಸಿಕೊಳ್ಳುವ ದೊಡ್ಡ ಸವಾಲು ಎದುರಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರಿಗೆ ಪುನರ್ವಸತಿ ಕಲ್ಪಿಸುವ ಹಾಗೂ ಅವರಿಗೆ ಬದುಕು ಕಟ್ಟಿಕೊಡುವುದು ಸುಲಭದ ಮಾತಲ್ಲ. ಕೇರಳ ಸಂಪೂರ್ಣ ಚೇತರಿಸಿಕೊಳ್ಳಲು ವರ್ಷಗಟ್ಟಲೆ ಬೇಕು.

ಮಳೆ ಕಡಿಮೆಯಾಗಿ ಪ್ರವಾಹ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ಜನರು ತಮ್ಮ ಸ್ವಸ್ಥಳಗಳಿಗೆ ಹಿಂದಿರುಗುತ್ತಿದ್ದಾರೆ. ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಯತ್ತ ಹಿಂದಿರುಗುತ್ತಿದೆ. ಕಳೆದ 20 ದಿನಗಳಿಂದ ಕಣ್ಮರೆಯಾಗಿದ್ದ ಸೂರ್ಯ ಇಂದು ಗೋಚರಿಸಿ ಕೊಂಚ ಸಮಾಧಾನ ಮೂಡಿಸಿದ್ದಾನೆ. ತಮ್ಮವರ ಸಾವು-ನೋವು, ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರ ಮುಂದಿನ ಭವಿಷ್ಯ ಹೇಗೆ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ. ಮುಂದೇನು ಎಂಬ ಚಿಂತೆಯಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಯತ್ನ ಮುಂದುವರಿಸಿದ್ದಾರೆ.

ಕೇರಳಕ್ಕೆ ಭಾರತದ ಬಹುತೇಕ ಎಲ್ಲ ರಾಜ್ಯಗಳು, ವಿದೇಶಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ಸಂತ್ರಸ್ತರನ್ನು ಸಂತೈಸಲು ಸಾಧ್ಯ ಎಂಬ ಪ್ರಶ್ನೆಯೂ ಎದುರಾಗಿದೆ.

100 ದಶಲಕ್ಷ ಡಾಲರ್ ನೆರವು:
ಕೇರಳಗೆ ಸಹಾಯ ಹಸ್ತ ನೀಡುವಲ್ಲಿ ಕೊಲ್ಲಿ ರಾಷ್ಟ್ರಗಳು ಹಿಂದೆ ಬಿದ್ದಿಲ್ಲ. ತಮ್ಮ ದೇಶಗಳ ಅಭಿವೃದ್ದಿಗೆ ಮಲಯಾಳಿಗಳು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕೊಲ್ಲಿ ದೇಶಗಳು ಇಂದು 100 ದಶಲಕ್ಷ ಡಾಲರ್ ನೆರವು ಘೋಷಿಸಿವೆ.  ಕೇರಳ ಮರು ನಿರ್ಮಾಣಕ್ಕೆ ಸಹಾಯಹಸ್ತ ಚಾಚುವಂತೆ ಮನವಿ ಮಾಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫೋನ್ಸ್, ಈಗ ರಾಜ್ಯಕ್ಕೆ ತುರ್ತಾಗಿ ವೈದ್ಯರು, ನರ್ಸ್‍ಗಳು, ಪ್ಯಾಕ್ ಮಾಡಿದ ಆಹಾರಗಳು ಹಾಗೂ ಔಷಧಿಗಳ ಅಗತ್ಯವಿದ್ದು ಅವುಗಳನ್ನು ಪೂರ್ಯೆಸುವಂತೆ ಕೋರಿದ್ದಾರೆ.

Facebook Comments

Sri Raghav

Admin