ಗೌರಿ-ದಾಬೋಲ್ಕರ್ ಹತ್ಯೆಯಲ್ಲಿ ಸಾಮ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Narendra-Dabholkar'
ಬೆಂಗಳೂರು, ಆ.21- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ಮೂಢನಂಬಿಕೆ ವಿರೋಧೀ ಹೋರಾಟಗಾರ ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಹತ್ಯೆಗೂ ನಂಟುಗಳಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.  ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಡೈರಿಯೊಂದು ದೊರಕಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳಿರುವುದಾಗಿ ತಿಳಿದುಬಂದಿದೆ.  ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಧರಿಸಿ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದು, ಈ ಮಾಹಿತಿಗಳ ಅನ್ವಯ ಸಚಿನ್ ಪ್ರಕಾಶ್ ರಾವ್ ಅಂದುರೆ ಎಂಬಾತನನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಸ್ಫೋೀಟಕ ಮಾಹಿತಿಯೊಂದು ಡೈರಿಯಿಂದ ದೊರಕಿದೆ.  ಗೌರಿ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 12 ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.  ಡಾ .ಎಂ.ಎಂ. ಕಲಬುರಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಕುರಿತಂತೆ ಸಂಗ್ರಹಿಸಲಾಗಿರುವ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಅಮೋಲ್ ಕಾಳೆ ಬಳಿ ವಶಕ್ಕೆ ಪಡೆಯಲಾಗಿದ್ದ ಡೈರಿಯಲ್ಲಿ ಅಂದುರೆ ಹೆಸರಿತ್ತು. ದಾಬೋಲ್ಕರ್, ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಂದಲೂ ಈ ಹೆಸರು ಕೇಳಿ ಬಂದಿತ್ತು ಎಂದು ತಿಳಿಸಿದ್ದಾರೆ.

ಕೆಲವು ಹಿಂದೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಕೆಲವರನ್ನು ಮಹಾರಾಷ್ಟ್ರ ರಾಜ್ಯದ ಉಗ್ರ ನಿಗ್ರಹ ಪಡೆ 10 ದಿನಗಳ ಹಿಂದಷ್ಟೇ ಬಂಧನಕ್ಕೊಳಪಡಿಸಿತ್ತು. ವೈಭವ್ ರಾವತ್, ಸುಧಾನ್ವಾ, ಗೊಂಡಾಲೆಕರ್ ಮತ್ತು ಶರದ್ ಕಸಲ್ಕರ್ ಎಂಬುವರನ್ನು ಬಂಧನಕ್ಕೊಳಪಡಿಸಿತ್ತು. ಈ ವೇಳೆ ಹಲವು ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು.  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದಲ್ಲಿ ಎಟಿಎಸ್ ದಾಳಿ ನಡೆಸಿತ್ತು. ಈ ವೇಳೆ ಸಿಕ್ಕ ಸುಳಿವುಗಳಿಂದ ಅಮೋಲ್ ಕಾಳೆಗೆ ಗೊಂಡಾಲೆಕರ್ ಪಿಸ್ತೂಲ್ ನೀಡಿದ್ದಾನೆಂದು ಬಲವಾಗಿ ಶಂಕಿಸಿತ್ತು. 11 ಪಿಸ್ತೂಲ್‍ಗಳ ಪೈಕಿ ಒಂದು ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಲಾಗಿದೆ. ಈ ಹಿಂದೆ ಇದೇ ರೀತಿಯ ಪಿಸ್ತೂಲ್ ಅನ್ನು ಡಾ. ಕಲಬುರಗಿ ಹತ್ಯೆಯ ಪ್ರಕರಣದಲ್ಲಿ ಬಳಕೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

# ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದೆ ಎಸ್‍ಐಟಿ
ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಸುಧಾನ್ವಾ ಗೊಂಡಾಲೆಕರ್‍ನಿಂದ ಒಟ್ಟು 11 ದೇಶೀ ನಿರ್ಮಿತ ಪಿಸ್ತೂಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಪಿಸ್ತೂಲ್‍ಗಳನ್ನು ಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಹೀಗಾಗಿ ವರದಿಗಾಗಿ ಕಾಯುತ್ತಿದೆ. ವರದಿ ಬಳಿಕ ಗೌರಿ ಲಂಕೇಶ್ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್ ಅನ್ನು ತಾಳೆ ಮಾಡಿ ನೋಡಲಾಗುತ್ತದೆ ಎಂದು ಎಸ್‍ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments

Sri Raghav

Admin